ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ವಿರೋಧ ಪಕ್ಷದ ನಾಯಕನಾಗಿ ರಾಜ್ಯ ಬಿಜೆಪಿ ಬಗ್ಗೆ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಿಎಂ ಬಿಎಸ್ ವೈ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು. ಈಶ್ವರಪ್ಪ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ಧರಾಗಿ ಉಳಿಯಬೇಕು ಎಂದಿದ್ದಾರೆ.
ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು ಎಂದಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದಿದ್ದಾರೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















