ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ Minister Murugesh Nirani ಅವರು ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಿರಾಣಿ, “ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಲಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭಗವಂತ ಖೂಬಾ, ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ,”ಎಂದರು.

” ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ‘ಬ್ಯುಲ್ಡ್ ಫಾರ್ ದ ವರ್ಲ್ಡ್’ ಎಂಬ ಪರಿಕಲ್ಪನೆಯಡಿ ಅನಾವರಣಗೊಳ್ಳುತ್ತಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ,”ಎಂದರು.

“ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಭೂ ಹಂಚಿಕೆಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ,”ಎಂದು ಸಚಿವರು ತಿಳಿಸಿದರು.
Also read: ಗರ್ತಿಕೆರೆ ಕಾಲೇಜು, ಕೋಣಂದೂರು ಶಾಲೆಯಲ್ಲಿ ಕಳ್ಳತನ
ಬಂಡವಾಳ ಹೂಡಿಕೆಯಲ್ಲಿ ಮುಂದು
“ನಮ್ಮ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಪರಿಣಾಮವಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. 2021ರ ಏಪ್ರಿಲ್ 21ರಿಂದ 2022ರ ಮಾರ್ಚ್ ಅವಧಿಯಲ್ಲಿ 1.76 ಲಕ್ಷ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯವು ಯಶಸ್ವಿಯಾಗಿದೆ. 2021ರ ಜುಲೈನಿಂದೀಚೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿವೆ,”ಎಂದು ಸಚಿವರು ತಿಳಿಸಿದರು.
“ಗ್ರೀನ್ ಹೈಡ್ರೋಜನ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ನವೀಕರಿಸಬಹುದಾದ ಇಂಧನಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್, ಇ-ಮೊಬಿಲಿಟಿ ಮತ್ತು ಮೂಲಸೌಕರ್ಯಗಳಂತಹ ವಲಯಗಳಲ್ಲಿ 4 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಒಪ್ಪಂದ ಏರ್ಪಟ್ಟಿದೆ,”ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post