ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ Madhu Bangarappa ಅವರು ಸಮುದಾಯದ ಪರವಾಗಿ ಕೈ ಮುಗಿದು ಮನವಿ ಮಾಡಿದರು.
ಇಂದು ಪ್ರದೇಶ ಆರ್ಯ ಈಡಿಗ ಸಂಘ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈಡಿಗ, ಬಿಲ್ಲವ ಮತ್ತು ನಾಮದಾರಿ ಸೇರಿ 26 ಪಂಗಡಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಶರಾವತಿ ಸಂತ್ರಸ್ತರು, ಇಡೀ ರಾಜ್ಯಕ್ಕಾಗಿ ಜಮೀನು ಕೊಟ್ಟಿದ್ದಾರೆ. ತಮ್ಮ ಜಮೀನು ತ್ಯಾಗ ಮಾಡಿ, ಇಂದಿಗೂ ಕತ್ತಲೆಯಲ್ಲಿ ಜೀವನ ಮಾಡುತ್ತಿದ್ದಾರೆ. ಅವರಿಗೆ ಭೂಮಿ ಕೊಡಿಸುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಅವರು ಮಾಡುತ್ತಿರುವ ಹೋರಾಟ ಎಂದಿಗೂ ಸ್ಫೂರ್ತಿ ತುಂಬಿಸಿದೆ. ಅವರ ಹೋರಾಟದ ಹಾದಿ ನಮ್ಮೆಲ್ಲರನ್ನೂ ಹುರಿದುಂಬಿಸುತ್ತದೆ ಎಂದರು.
ನಾವು ಹೆಂಡ ಮಾರಿಕೊಂಡು ಈ ಮಟ್ಟಕ್ಕೆ ಬಂದಿರೋರು. ಹೆಂಡ ನಿಷೇಧ ಮಾಡುವ ಮೂಲಕ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದೆ. ನಮಗೆ ಶೈಕ್ಷಣಿಕ ಹಾಗೂ ಸಾಮಾಜಿಕ ರಕ್ಷಣೆ ಕೊಡುವ ಕೆಲಸ ಆಗುತ್ತದೆ ಎಂದು ನಂಬಿದ್ದೇನೆ. ನಾನು ಸಚಿವನಾಗಿ ಇಲ್ಲಿಗೆ ಬಂದಿಲ್ಲ. ನಮ್ಮ ಸಮಾಜದ ವ್ಯಕ್ತಿಯಾಗಿ ಬಂದು ಮಾತನಾಡುತ್ತಿದ್ದೇನೆ ಎಂದರು.
ನಮ್ಮನ್ನು ಒಂದು ರೀತಿ ಕಾಡು ಮನುಷ್ಯರು ಅಂತ ಹೇಳಬಹುದು. ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಚುನಾವಣೆಗೆ ಮುನ್ನ ನೀವು ಭರವಸೆ ನೀಡಿದ್ದೀರಿ. ಇದರ ಸಾಕಾರಕ್ಕೆ ಕೇಂದ್ರ ಸರ್ಕಾರದ ಬೆಂಬಲ ಸಹ ಬೇಕು. ಕೇಂದ್ರ ಸರ್ಕಾರವನ್ನು ಮನವೊಲಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ನನ್ನ ತಂದೆ ಬಂಗಾರಪ್ಪ ಸಿಎಂ ಆದಾಗ ನನಗೆ ನೋಡಲು ಆಗಲಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿದಾಗ, ನಾನು ನಮ್ಮ ತಂದೆ ಬಂಗಾರಪ್ಪರನ್ನು ನೋಡಿದ ಹಾಗೇ ಆಗುತ್ತದೆ. ಸಿದ್ದರಾಮಯ್ಯ ಅವರನ್ನು ನಮ್ಮ ತಂದೆಯ ಸ್ಥಾನದಲ್ಲಿ ನೋಡತ್ತೇನೆ. ಅವರಿಗೆ ನಾನು ಕೈ ಮುಗಿದು ಕೇಳತ್ತೇನೆ. ನಾವು. ಬೀದಿಗೆ ಬಂದಿದ್ದೇವೆ. ಸರ್ಕಾರಕ್ಕೆ ಹಣಕಾಸು ಸಮಸ್ಯೆ ಇರುತ್ತದೆ. ಆದರೂ ನಮ್ಮ ಸಮುದಾಯಕ್ಕೆ 500 ಕೋಟಿ ಮೀಸಲಿಡಿ ಎಂದು ಬೇಡಿಕೆ ಇಟ್ಟರು.
Also read: ನಿವೃತ್ತ ಮುಖ್ಯ ಅರಣ್ಯ ಪರಿಪಾಲಕರ ನೇತೃತ್ವದ ಸಮಿತಿಯಿಂದ ಅರ್ಜುನನ ಸಾವಿನ ತನಿಖೆ: ಈಶ್ವರ ಖಂಡ್ರೆ
ನಮ್ಮ ಸಮುದಾಯದ ನಾಯಕರು ಮುಖ್ಯಮಂತ್ರಿಗಳ ಮುಂದೆ ವಿವಿಧ ಬೇಡಿಕೆಗಳನ್ನು ನಿಮ್ಮ ಮುಂದಿಟ್ಟಿದ್ದಾರೆ. ಜಾಗ ಬಿಟ್ಟು ಕೊಟ್ಟು ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಭಾಗದ ಸಂತ್ರಸ್ತರ ಸಮ್ಯಸೆ ಹೆಚ್ಚಿದೆ. ಅವರಿಗೆ ಹಕ್ಕು ಪತ್ರಗಳನ್ನು ನೀಡಿದ ಭರವಸೆ, ಭರವಸೆ ಆಗಿಯೇ ಉಳಿಯಬಾರದು. ರಾಜ್ಯಕ್ಕೆ ಹತ್ತಾರು ಭಾಗ್ಯ ಕೊಟ್ಟ ನೀವು, ನಮಗೆ ಭೂ ಹಕ್ಕನ್ನ ಕೊಡಿ ಎಂದರು.
ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು
ನಮ್ಮ ಸಮುದಾಯದ ಜನರ ಬಹುದಿನಗಳ ಬೇಡಿಕೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸುವ ಘೋಷಣೆಯನ್ನು ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಚಾಲನೆ ನೀಡಿದ್ದಾರೆ. ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತ ಜೀವನಗಾಥೆ ಅಳವಡಿಕೆಗೆ ಮತ್ತೆ ಸಚಿವರು ಮನವಿ ಮಾಡಿ, ನಿಗಮಕ್ಕೆ ಹಣಕಾಸಿನ ಸಹಾಯ ಮಾಡಲು ಕೋರಿ ಕೃತಜ್ಞತೆ ಸಲ್ಲಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ನಟ ಶಿವರಾಜ್ ಕುಮಾರ್, ಈಡಿಗ ಸಮುದಾಯದ ಸ್ವಾಮೀಜಿಗಳಾದ ವಿಖ್ಯಾತನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ನಟ ಶ್ರೀಮುರಳಿ, ಶಾಸಕರಾದ ಭೀಮಣ್ಣ ನಾಯ್ಕ, ಬೇಳೂರು ಗೋಪಾಲಕೃಷ್ಣ, ಹೆಚ್ ಆರ್ ಗವಿಯಪ್ಪ ಮತ್ತಿತರರು ಭಾಗವಹಿಸಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post