ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂತಾನೋತ್ಪತ್ತಿ (ಐ.ವಿ.ಎಫ್) ಸಂಬಂಧಿ ಚಿಕಿತ್ಸೆಗಳು ಹಾಗೂ ಸ್ತ್ರೀರೋಗಗಳ ಚಿಕಿತ್ಸೆಯಲ್ಲಿ ಭಾರತದಲ್ಲೇ ಮುಂಚೂಣಿಯಲ್ಲಿರುವ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಗೆ ಇದೀಗ 50 ವರ್ಷಗಳು ತುಂಬಿದ್ದು, ಇಂದು ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಗುಣಶೀಲದ ಸೇವಾಯಾನದಲ್ಲಿ ಮಹತ್ವದ ಮೈಲುಗಲ್ಲಾಗಿರುವ ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ #Minister Dinesh Gundurao ಅವರು ಭಾಗವಹಿಸಿ, ಆಸ್ಪತ್ರೆಯ ನವೀಕೃತ ಸ್ವರೂಪವನ್ನು ಅನಾವರಣಗೊಳಿಸಿದರು.
ಜೊತೆಗೆ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುವ ‘ಮುಖಚರ್ಯೆ ಗುರುತಿಸುವ ತಂತ್ರಜ್ಞಾನ’ ಮತ್ತು ಮಗುವಿನ ಬೆಳವಣಿಗೆ ಮತ್ತು ಪ್ರಗತಿಗೆ ಮೀಸಲಾದ ಜಾಗತಿಕ ದರ್ಜೆಯ ‘ಆಕ್ಸಾನ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್’ ಅನ್ನು ಉದ್ಘಾಟಿಸಿದರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೊಸದಾಗಿ ಪ್ರಾರಂಭವಾದ ಆಕ್ಸಾನ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ – ಇದು ಸಮಗ್ರ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿ ಕೇಂದ್ರವಾಗಿದ್ದು, ಮಕ್ಕಳ ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಾಮರ್ಥ್ಯವನ್ನು ಸುಧಾರಿಸುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಈ ಮೂಲಕ, ಗುಣಶೀಲ ಆಸ್ಪತ್ರೆ ತನ್ನ ಸೇವೆಯನ್ನು ಸ್ತ್ರೀರೋಗ ಮತ್ತು ಸಂತಾನಫಲ ಚಿಕಿತ್ಸೆಗಳ ಜೊತೆಗೆ ಮಕ್ಕಳ ಆರೋಗ್ಯ ಬೆಳವಣಿಗೆ ಕಡೆಗೂ ವಿಸ್ತರಿಸಿದಂತಾಗಿದೆ.
ಸಂತಾನ ಫಲ ಚಿಕಿತ್ಸೆಗಳಲ್ಲಿ ಐದು ದಶಕಗಳ ಸಾರ್ಥಕ ಸೇವೆಗಾಗಿ ಗುಣಶೀಲ ಆಸ್ಪತ್ರೆಯ #Gunasheela Hospital ತಂಡವನ್ನು ಅಭಿನಂದಿಸಿದ ದಿನೇಶ್ ಗುಂಡೂರಾವ್ ಅವರು, “ಕರ್ನಾಟಕದ ಎಲ್ಲೆಡೆ ದಂಪತಿಗಳು ಮತ್ತು ಮಹಿಳೆಯರಿಗೆ ಸುಧಾರಿತ ಸಂತಾನೋತ್ಪತ್ತಿ ಸೇವೆ ಮತ್ತು ಸ್ತ್ರೀರೋಗ ಚಿಕಿತ್ಸೆಯ ಸೌಕರ್ಯಗಳನ್ನು ಒದಗಿಸಲಿ,” ಎಂದು ಸಲಹೆ ನೀಡಿದರು.
ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಂತಾನಸಾಫಲ್ಯ ತಜ್ಞೆ ಡಾ. ದೇವಿಕಾ ಗುಣಶೀಲ, “ಇಂದು ಗುಣಶೀಲದ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಿಟ್ಟ ದಿನ. ಐವತ್ತು ವರ್ಷಗಳ ಹಿಂದೆ ನನ್ನ ತಾಯಿ ಡಾ. ಸುಲೋಚನಾ ಗುಣಶೀಲ ಅವರು ಆರಂಭಿಸಿದ ಈ ಆಸ್ಪತ್ರೆ ಇಂದು ಸಾವಿರಾರು ಕುಟುಂಬಗಳ ಭವಿಷ್ಯವನ್ನೇ ಬದಲಿಸಿದೆ. ದಕ್ಷಿಣ ಭಾರತದ ಮೊದಲ ಪ್ರನಾಳ ಶಿಶು 1988ರಲ್ಲಿ ಜನಿಸಿದ್ದರಿಂದ ಆರಂಭಿಸಿ ಇವತ್ತಿನವರೆಗೆ ಗುಣಶೀಲ ಆಸ್ಪತ್ರೆಯು ಹೊಸ ಭರವಸೆ, ನಾವೀನ್ಯತೆ ಹಾಗೂ ಕಾರುಣ್ಯತೆಯ ಪ್ರತಿಕವಾಗಿ ನಿಂತಿದೆ. ಕಾಲ ಕಾಲಕ್ಕೆ ಜಾಗತಿಕ ಗುಣಮಟ್ಟದ ವೈದ್ಯಕೀಯ ತಂತ್ರಜ್ಞಾನಗಳನ್ನು ನಾವು ಅಳವಡಿಸಿಕೊಳ್ಳುತ್ತಾ ಬಂದಿದ್ದೇವೆ. ಸಂತಾನೋತ್ಪತ್ತಿ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಸಮಸ್ಯೆಗಳಿಗೂ ಪರಿಹಾರ ನೀಡುವ ಪ್ರಯತ್ನ ಮಾಡುತ್ತಾ, ಬಂಜೆತನ ಹೊಂದಿರುವ ಪ್ರತಿಯೊಂದು ದಂಪತಿಯೂ ಮಗುವನ್ನು ಹೊಂದಲು ಸೂಕ್ತ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ. ಐ.ವಿ.ಎಫ್ ನಿಂದ ಹಿಡಿದು ವಂಶವಾಹಿ ಪರೀಕ್ಷೆಯವರೆಗೂ ಒಂದೇ ಸೂರಿನಡಿಯಲ್ಲಿ ಸೇವೆ ನೀಡುತ್ತಿದ್ದೇವೆ. ಇದೀಗ ಆಕ್ಸಾನ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ ಮೂಲಕ ದೂರದರ್ಶಿತ್ವವನ್ನು ಮಗುವಿನ ಸಮಗ್ರ ಆರೋಗ್ಯ ಮತ್ತು ಬೆಳವಣಿಗೆಗೆ ವಿಸ್ತರಿಸಿದ್ದೇವೆ,” ಎಂದರು.
ಗುಣಶೀಲ ಆಸ್ಪತ್ರೆಯ ಎರಡು ಮಿಷನ್‌ಗಳಾದ ಗುಣಮಟ್ಟದ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಕುರಿತು ಮಾಹಿತಿ ನೀಡಿದ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಯ ನಿರ್ದೇಶಕ ಡಾ. ರಾಜಶೇಖರ್ ನಾಯಕ್, “ಗುಣಶೀಲ ಯಾವತ್ತಿಗೂ ಒಂದು ಆಸ್ಪತ್ರೆಗಿಂತ ಹೆಚ್ಚಾಗಿ ಜ್ಞಾನ, ಕರುಣೆ ಮತ್ತು ನಾವೀನ್ಯತೆಯ ಕೇಂದ್ರದ ರೀತಿಯಲ್ಲಿ ಸೇವೆ ನೀಡುತ್ತಾ ಬಂದಿದೆ. ಈವರೆಗೆ ನಾವು 250ಕ್ಕೂ ಹೆಚ್ಚು ವೈದ್ಯರನ್ನು ಮತ್ತು 100ಕ್ಕೂ ಹೆಚ್ಚು ಭ್ರೂಣಶಾಸ್ತ್ರಜ್ಞರನ್ನು ತರಬೇತುಗೊಳಿಸಿದ್ದೇವೆ. ತನ್ಮೂಲಕ ಡಾ. ಸುಲೋಚನಾ ಗುಣಶೀಲ ಅವರ ಪರಂಪರೆ ಮುಂದುವರೆಯುವಂತೆ ನೋಡಿಕೊಂಡು, ಮುಂದಿನ ತಲೆಮಾರಿನ ವೃತ್ತಿಪರರನ್ನು ಸಜ್ಜುಗೊಳಿಸುತ್ತಿದ್ದೇವೆ. ಮುಂದಿನ ಹಂತದಲ್ಲಿ ನಾವು ಕರ್ನಾಟಕದ 2 ಮತ್ತು 3 ನೇ ಸ್ತರದ ನಗರಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ. ಅದರೊಂದಿಗೆ ರಾಜ್ಯದ ಮೂಲೆ ಮೂಲೆಗೂ ಸುಧಾರಿತ ಸಂತಾನೋತ್ಪತ್ತಿ ಚಿಕಿತ್ಸೆಯ ಸೌಕರ್ಯಗಳು ತಲುಪಬೇಕು ಎಂಬುದು ನಮ್ಮ ಆಶಯ. 2024ರಲ್ಲಿ ಬಳ್ಳಾರಿಯಲ್ಲಿ ನಮ್ಮ ಘಟಕ ಆರಂಭಿಸುವ ಮೂಲಕ ಈ ಕನಸಿಗೆ ಸಾಕಾರದ ರೂಪ ನೀಡುವ ಕಾರ್ಯ ಆರಂಭವಾಗಿದೆ. ನಮ್ಮ ಮುಖ್ಯ ಆಸ್ಪತ್ರೆ ಬಸವನಗುಡಿಯಲ್ಲಿದ್ದು, ಇದು ಸಂತಾನಸಾಫಲ್ಯ ಚಿಕಿತ್ಸೆಯ ಯಾನದಲ್ಲಿ ಯಾವಾಗಲೂ ಕೇಂದ್ರ ಸ್ಥಾನದಲ್ಲೇ ಉಳಿಯಲಿದೆ. ಕೋರಮಂಗಲ ಮತ್ತು ಬಳ್ಳಾರಿಯಲ್ಲಿರುವ ನಮ್ಮ ಘಟಕಗಳು ವಿಶ್ವದರ್ಜೆಯ ಸಂತಾನ ಸಾಫಲ್ಯ ಸೌಕರ್ಯಗಳನ್ನು ಎಲ್ಲರಿಗೂ ಸಮೀಪದ ಸ್ಥಳದಲ್ಲೇ ಲಭಿಸುವಂತೆ ಮಾಡುವ ಗುರಿಗೆ ನಿದರ್ಶನಗಳಾಗಿವೆ,” ಎಂದರು.
ಖ್ಯಾತ ಸ್ತ್ರೀರೋಗ ತಜ್ಞೆ ದಿವಂಗತ ಡಾ. ಸುಲೋಚನಾ ಗುಣಶೀಲ ಹಾಗೂ ಸರ್ಜನ್ ಡಾ. ಮಾವಹಳ್ಳಿ ಗುಣಶೀಲ ಅವರಿಂದ 1975ರಲ್ಲಿ ಸ್ಥಾಪಿತವಾದ ಗುಣಶೀಲ ಆಸ್ಪತ್ರೆಯು ಇಂದು ಸಂತಾನೋತ್ಪತ್ತಿ (ಐ.ವಿ.ಎಫ್) ಮತ್ತು ಸ್ತ್ರೀರೋಗ ಚಿಕಿತ್ಸೆಗಳಲ್ಲಿ ದೇಶದಾದ್ಯಂತ ಪ್ರಸಿದ್ದಿ ಪಡೆದಿದೆ. 1988 ರಲ್ಲಿ ಗುಣಶೀಲ ಆಸ್ಪತ್ರೆಯು ದಕ್ಷಿಣ ಭಾರತದ ಮೊದಲ ಪ್ರನಾಳ ಶಿಶುವಿನ ಜನನಕ್ಕೆ ಕಾರಣವಾಗುವುದರೊಂದಿಗೆ ದೇಶದಲ್ಲೇ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿತ್ತು. ಅಲ್ಲಿಂದ ಮೊದಲ್ಗೊಂಡು ಸಂತಾನ ಸಾಫಲ್ಯ ಚಿಕಿತ್ಸೆಗಳಲ್ಲಿ ಗುಣಶೀಲ ಆಸ್ಪತ್ರೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು.
ಸಾಧನೆ: ಕಳೆದ ಐದು ದಶಕಗಳಲ್ಲಿ ಐದು ದಶಕಗಳಲ್ಲಿ ಗುಣಶೀಲ ಆಸ್ಪತ್ರೆಯು ಸಂತಾನ ಸಾಫಲ್ಯ ಚಿಕಿತ್ಸೆಗಳಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದೆ. ಭಾರತದ ಮೊದಲ ಇನ್-ಹೌಸ್ ಫರ್ಟಿಲಿಟಿ ಜೆನೆಟಿಕ್ಸ್ ಪ್ರಯೋಗಾಲಯ ಪ್ರಾರಂಭವಾಗಿದ್ದು ಇದೇ ಆಸ್ಪತ್ರೆಯಲ್ಲಿ. ಈ ಪ್ರಯೋಗಾಲಯದಲ್ಲಿ ಐ.ವಿ.ಎಫ್ ಚಿಕಿತ್ಸೆಗೂ ಮೊದಲು ಸುಧಾರಿತ ವಂಶವಾಹಿ ಪರೀಕ್ಷೆ ನಡೆಸಲಾಗುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ ಸಂತಾನ ಸಾಮರ್ಥ್ಯ ಕಾಯ್ದಿರಿಸುವ ಸೌಕರ್ಯವನ್ನು ಸಮಾಜ ಸೇವೆಯ ಸ್ವರೂಪದಲ್ಲಿ ಆಸ್ಪತ್ರೆಯು ಒದಗಿಸುತ್ತ ಬಂದಿದೆ. 2004ರಲ್ಲಿ ಗುಣಶೀಲ ಆಸ್ಪತ್ರೆಯಲ್ಲಿ ಭಾರತದ ಮೊದಲ ಇನ್ ವಿಟ್ರೋ ಮ್ಯಾಚುರೇಷನ್ (ಐ.ವಿ.ಎಂ) ಚಿಕಿತ್ಸೆಯಾಧಾರಿತ ಶಿಶು ಜನಿಸಿದ್ದು ಕೂಡಾ ಮಹತ್ವದ ಮೈಲುಗಲ್ಲಾಗಿದೆ. 2013 ರಲ್ಲಿ ಎಂಬ್ರಿಯೋಸ್ಕೋಪ್ ತಂತ್ರಜ್ಞಾನದ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಗರ್ಭಧಾರಣೆ ಆಯಿತು. ಈ ತಾಯಿಗೆ ಅವಳಿ ಮಕ್ಕಳು ಜನಿಸಿದವು. 2016ರಲ್ಲಿ ಪ್ರೀ ಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ (ಪಿ.ಜಿ.ಎಸ್) ಮೂಲಕ 24 ಗಂಟೆಗಳಲ್ಲಿ ಶೀತಲೀಕೃತ ಭ್ರೂಣ ಬಳಸಿ ಭಾರತದಲ್ಲೇ ಮೊದಲ ಗರ್ಭಧಾರಣೆಯನ್ನು ಗುಣಶೀಲ ಆಸ್ಪತ್ರೆಯಲ್ಲಿ ಮಾಡಲಾಯಿತು. ಇದರಲ್ಲಿನ ನಿಖರತೆ ಮತ್ತು ವೇಗ ಒಂದು ದಾಖಲೆಯಾಗಿದೆ. ಗುಣಶೀಲ ಆಸ್ಪತ್ರೆಯು ತನ್ನ ಐದು ದಶಕಗಳ ಯಾನದಲ್ಲಿ 2.72 ಲಕ್ಷಕ್ಕೂ ಹೆಚ್ಚು ಸಂತಾನಹೀನ ದಂಪತಿಗಳಿಗೆ ಚಿಕಿತ್ಸೆ ನೀಡಿದೆ. ತನ್ಮೂಲಕ ಪ್ರಸೂತಿ (ಹೆರಿಗೆ ಮೂಲಕ) ಮತ್ತು ಸಂತಾನೋತ್ಪತ್ತಿ ಚಿಕಿತ್ಸೆಗಳ ಮೂಲಕ 4.68 ಲಕ್ಷ ಶಿಶುಗಳ ಜನನಕ್ಕೆ ನೆರವಾಗಿದೆ. ಮನೆಗೊಂದು ಮಗು ಬೇಕು ಎಂದು ಕನಸು ಕಾಣುವ ದಂಪತಿಗಳಿಗೆ ಜಾಗತಿಕ ದರ್ಜೆಯ ತಂತ್ರಜ್ಞಾನ ಮತ್ತು ಚಿಕಿತ್ಸೆಗಳಿಂದ ನಂಬಿಕೆ, ಭರವಸೆ ಮೂಡಿಸುವ ಮೂಲಕ ಭವಿಷ್ಯವನ್ನು ಸುಂದರವಾಗಿಸುವ ಕಾಯಕವನ್ನು ಗುಣಶೀಲ ಆಸ್ಪತ್ರೆ ನಿರಂತರವಾಗಿ ನಡೆಸಿಕೊಂಡು ಹೋಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಗುಣಶೀಲ ಆಸ್ಪತ್ರೆ, ಬಸವನಗುಡಿ, ಬೆಂಗಳೂರು, ದೂ: 080-46462600.
ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆ ಕುರಿತು:
1975ರಲ್ಲಿ 10 ಹಾಸಿಗೆಗಳ ಆಸ್ಪತ್ರೆಯಾಗಿ ಆರಂಭಗೊಂಡ ಗುಣಶೀಲ ಆಸ್ಪತ್ರೆ, ಇಂದು ಭಾರತದ ಅತ್ಯಾಧುನಿಕ ಸಂತಾನಸಾಫಲ್ಯ ಕೇಂದ್ರ ಮತ್ತು ಸ್ತ್ರೀರೋಗ ಚಿಕಿತ್ಸೆಗಳ ಆಸ್ಪತ್ರೆಗಳಲ್ಲಿ ಒಂದಾಗಿದೆ. ಸಂತಾನೋತ್ಪತ್ತಿ ಚಿಕಿತ್ಸೆಗಳಲ್ಲದೇ, ಆಸ್ಪತ್ರೆಯು ಸ್ತ್ರೀರೋಗ ಚಿಕಿತ್ಸೆ, ಹೈ ರಿಸ್ಕ್ ಗರ್ಭಧಾರಣೆ ನಿರ್ವಹಣೆ, ಋತುಬಂಧ ಸಂಬಂಧಿ ಚಿಕಿತ್ಸೆ ಮತ್ತು ಎಂಬ್ರಿಯಾಲಜಿಸ್ಟ್‌ಗಳಿಗೂ ತರಬೇತಿ ನೀಡುವ ಕೇಂದ್ರವಾಗಿಯೂ ಗುಣಶೀಲ ಹೆಸರು ಗಳಿಸಿದೆ. ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಪ್ಪುಗಳನ್ನು ತಪ್ಪಿಸಲು ಆರ್.ಎಫ್.ಐ.ಡಿ., ಟ್ರೈ-ಗ್ಯಾಸ್ ಇನ್‍ಕ್ಯುಬೇಟರ್ ಹಾಗೂ ಕ್ಲೀನ್-ರೂಮ್ ಐ.ವಿ.ಎಫ್ ಪ್ರಯೋಗಾಲಯದ ತಂತ್ರಜ್ಞಾನಗಳನ್ನು ಬಳಸುವ ಮೂಲ್ಕ ಗುಣಶೀಲ ಆಸ್ಪತ್ರೆಯು ಸುರಕ್ಷತೆ ಮತ್ತು ಚಿಕಿತ್ಸೆಗಳ ಯಶಸ್ಸಿಗೆ ಸಂಬಂಧಿಸಿದಂತೆ ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post