ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋಲಾರದ ಕುಡಿಯುವ ನೀರಿನ ವಿಷಯ ಇಟ್ಟುಕೊಂಡು ತಮ್ಮ ಅನಗತ್ಯ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೃಷ್ಣಭೈರೇಗೌಡ Krishnabairegowda ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ Former CM H D Kumaraswamy ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಿಮ್ಮ ಬುದ್ದಿವಂತಿಕೆಯ ಬಗ್ಗೆ ನನ್ನ ಅಭಿಪ್ರಾಯ ಬದಲಾಗಿದೆ ಎಂದು ಟಾಂಗ್ ನೀಡಿದ್ದಾರೆ.
ಕೃಷ್ಣಭೈರೇಗೌಡ ಅವರು ಬಹಳ ತಿಳಿವಳಿಕೆ ಉಳ್ಳವರು ಎಂದು ಭಾವಿಸಿದ್ದೆ. ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ನಿನ್ನೆ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು ಎಂದು ಮಾಜಿ ಮುಖ್ಯಮಂತ್ರಿ ಅವರು ಕಾಲೆಳೆದಿದ್ದಾರೆ.
ಕೃಷ್ಣಭೈರೇಗೌಡರೇ, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ? ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಪಾತ್ರ ಏನು? ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿವಿಮಾತು ಹೇಳಿದ್ದಾರೆ.
Also read: ಭಜರಂಗದಳದ ಕಾರ್ಯಕರ್ತನ ಮೇಲೆ ದಾಳಿ ಹಿನ್ನೆಲೆ ಪ್ರತಿಭಟನಾ ಮೆರವಣಿಗೆ: ಶಾಸಕ ಹಾಲಪ್ಪ ಭಾಗಿ
ನೀರೇ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನ ಕೂಪಕ್ಕೆ ತಳ್ಳಿದವರು ಯಾರು? ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೆ ಕೃಷ್ಣಭೈರೇಗೌಡರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನೈಟ್ರೇಟ್, ಪಾಸ್ಪರಸ್, ಸೀಸ ಸೇರಿ ಬೆಂಗಳೂರು ಜನರ ಮಲಮೂತ್ರಗಳೇ ತುಂಬಿರುವ ಕೊಳಚೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸದೆ ಕೋಲಾರಕ್ಕೆ ಹರಿಸಿದ್ದೇ ಮಹಾಪಾಪ. ಇಷ್ಟು ದಿನ ಅದನ್ನೇ ಪುಣ್ಯತೀರ್ಥ ಎಂದು ಡಂಗುರ ಹೊಡೆದವರು ನಿನ್ನೆ ಕೋಲಾರದಲ್ಲಿ 3ನೇ ಹಂತದ ಸಂಸ್ಕರಣೆ ಬಗ್ಗೆ ಹೇಳಿ ಕಾವೇರಿ ಬಗ್ಗೆ ಬೊಗಳೆ ಬಿಡುತ್ತೀರಲ್ಲ, ಸ್ವಲ್ಪವಾದರೂ ಸಂಕೋಚ ಬೇಡವೇ? ಎಂದು ಅವರು ಕಿಡಿ ಕಾರಿದ್ದಾರೆ.
5 ವರ್ಷ ಸರಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ? ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ ಮಾಜಿ ಮುಖ್ಯಮಂತ್ರಿಗಳು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post