ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ವರ್ಷ ಜುಲೈನಲ್ಲಿ ನಡೆದ ವನಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ನಡೆಲಾದ 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಆಡಿಟ್ ವರದಿಯನ್ನು 3 ತಿಂಗಳೊಳಗಾಗಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ #B Eshwara Khandre ಆದೇಶ ನೀಡಿದ್ದಾರೆ.
ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಎಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಇಲಾಖೆಯ ನರ್ಸರಿಗಳಲ್ಲಿ ಎಷ್ಟು ಎತ್ತರದ ಸಸಿ ಬೆಳೆಸಲಾಗಿದೆ ಎಂಬ ಬಗ್ಗೆ 7 ದಿನಗಳೊಳಗಾಗಿ ಮಾಹಿತಿ ನೀಡುವಂತೆಯೂ ತಿಳಿಸಿದರು.

ಅರಣ್ಯ ಮತ್ತು ಪಟ್ಟಾ ಭೂಮಿಯಲ್ಲಿ ಮರಗಳ ಅಕ್ರಮ ಕಡಿತಲೆ ಆಗುತ್ತಿರುವ ಬಗ್ಗೆ ಸತತ ದೂರುಗಳು ಬರುತ್ತಿದ್ದು, ನಿರ್ಲಕ್ಷ್ಯ ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅರಣ್ಯ ಸಚಿವರು ನೀಡಿದರು. ಕೊಡಗು

ಅರಣ್ಯ ಒತ್ತುವರಿ ಸಹ ಅವ್ಯಾಹತವಾಗಿ ನಡೆಯುತ್ತಿದ್ದು, ನಿರಂತರವಾಗಿ ಉಪಗ್ರಹ ಚಿತ್ರ ಪರಿಶೀಲಿಸಿ ಮರ ಕಡದು, ಅರಣ್ಯ ಭೂಮಿ ಒತ್ತುವರಿ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಹಾಗೂ ಒಂದೊಮ್ಮೆ ಅರಣ್ಯ ಇಲಾಖೆಯೇ ಪಟ್ಟಾ ಜಮೀನಿನ ಸ್ವಾಧೀನದಲ್ಲಿದ್ದರೆ ಅಂತಹ ಜಮೀನುಗಳನ್ನು ನಿಯಮ ಮತ್ತು ಸರ್ಕಾರದ ಆದೇಶದ ರೀತ್ಯ ಇತ್ಯರ್ಥಪಡಿಸಿ, ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಅರಣ್ಯ ಸಚಿವರು ಸೂಚಿಸಿದರು.

ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್)ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿ ವಿಸ್ತೀರ್ಣ ಕಡಿಮೆ ಮಾಡಿದ ಬಳಿಕವೂ ಸರ್ಕಾರಿ ಆಸ್ಪತ್ರೆ, ಅಂಗನವಾಡಿ, ಪಟ್ಟಾ ಭೂಮಿ ಇದರಲ್ಲಿ ಸೇರಿದ್ದು, ಜಂಟಿ ಸರ್ವೆಯನ್ನು ತ್ವರಿತವಾಗಿ ನಡೆಸಿ, ಕಾನೂನು ಇಲಾಖೆ ಸಲಹೆ ಪಡೆದು ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ಈ ಸಮಸ್ಯೆ ಪರಿಹರಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
Also read: ನಮ್ಮ ಆರ್ಥಿಕತೆ ಉದೋನ್ಮುಖವಲ್ಲ, ಮರುಕಳಿಸುವ ವೈಭವ: ಡಾ.ಆರ್. ವೈದ್ಯನಾಥನ್
ಸೆಕ್ಷನ್ 4ರಿಂದ ಸೆಕ್ಷನ್ 17 ಮಾಡುವ ಮತ್ತು ಸೆಕ್ಷನ್ 33ರಡಿ ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ತುಂಬಾ ವಿಳಂಬ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆದೇಶ ನೀಡಿದರು.

ಅರಣ್ಯ ಇಲಾಖೆಯಲ್ಲಿನ ಹಾಲಿ ನೇಮಕಾತಿ ಪ್ರಕ್ರಿಯೆ ಮತ್ತು ಬಾಕಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ಕೈಗೊಂಡಿರುವ ಕ್ರಮಗಳ ವಿವರ ಪಡೆದ ಸಚಿವರು, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡುವಂತೆ ಸೂಚನೆ ನೀಡಿದರು.
ಡಿಆರ್’ಎಫ್’ಓಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಈಶ್ವರ ಖಂಡ್ರೆ, ವಾರ್ಚ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ವೇತನವನ್ನು ಸಕಾಲದಲ್ಲಿ ಮಾಡಲು ಸೂಚಿಸಿದರು.

ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ಹಣ ಸ್ವೀಕೃತಿಗೆ ಆನ್ ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ತ್ವರಿತವಾಗಿ ಕ್ರಮ ವಹಿಸುವಂತೆ ಮತ್ತು ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ಇನ್ನೊಂದು ತಿಂಗಳೊಳಗೆ ತಂತ್ರಾಂಶ ಮತ್ತು ವೆಬ್ ಸೈಟ್ ರೂಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post