ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕವನ್ನು ಆರೋಗ್ಯ ಕರ್ನಾಟಕವನ್ನಾಗಿಸುವ ಸಂಕಲ್ಪ ತೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿಂದು ಇನ್ಸ್ಟಿಟ್ಯೂಟ್ ಅಫ್ ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾನ್ಟ್ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಆರೋಗ್ಯ ಕರ್ನಾಟಕವನ್ನಾಗಿಸುವ ಸಂಕಲ್ಪಕ್ಕೆ ರಾಜ್ಯದ ಆರೋಗ್ಯ ಇಲಾಖೆ ಚಾಲನಾ ವಾಹನವಾಗಲಿದೆ ಎಂದರು.
ರಾಜ್ಯದ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಆರೋಗ್ಯ ವಲಯದ ಪ್ರಮುಖರು ಹಾಗೂ ತಜ್ಞರ ಜತೆ ಚರ್ಚೆ ಸಮಾಲೋಚನೆ ನಡೆಸಿ ರಾಜ್ಯಕ್ಕೆ ಆರೋಗ್ಯ ವಿಷನ್‌ನ್ನು ರೂಪಿಸಿದ್ದಾರೆ. ಈ ಆರೋಗ್ಯ ವಿಷನ್‌ನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡಿ ಕರ್ನಾಟಕವನ್ನು ಆರೋಗ್ಯ ಕರ್ನಾಟಕವಾಗಿಸುವುದಾಗಿ ಅವರು ಹೇಳಿದರು.
ಇಡೀ ದೇಶದಲ್ಲೇ ಮಾದರಿ ಎಂಬಂತೆ ಬೆಂಗಳೂರಿನಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆಯನ್ನು ಮಾಡಿದ್ದೇವೆ. ಸಂಪೂರ್ಣ ಚಿಂತನೆ ಅಳವಡಿಸಿ ಈ ಆಸ್ಪತ್ರೆ ರೂಪುಗೊಳ್ಳಲು ದಾನಿಗಳು ಕಾರಣ. ಇಲ್ಲಿನ ವೈದ್ಯರು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಿದೆ ಎಂದರು.

ಅಂಗಾಂಗ ಕಸಿಗೆ ದೊಡ್ಡ ಸಾಲೇ ಇದ್ದು, ಇಂತಹ ಸಂದರ್ಭದಲ್ಲಿ ವೈದ್ಯರುಗಳು ನೈತಿಕವಾಗಿ ನಡೆದುಕೊಳ್ಳುವ ಅವಶ್ಯಕತೆ ಈಗ ಹೆಚ್ಚಿದೆ. ಎಥಿಕಲ್ ಕ್ಲಿನಿಕಲ್ ಪ್ರಾಕ್ಟೀಸ್ ಇಂದಿನ ಅಗತ್ಯ ಎಂದ ಅವರು ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು. ಸತ್ಯ ಮಾರ್ಗದಲ್ಲಿ ಅಂಗಾಂಗ ಕಸಿ ನಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಮಟ್ಟಿಗೆ ಬಡವರನ್ನು ಶೋಷಣೆ ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ವೈದ್ಯರು ಹೆಚ್ಚು ನೈತಿಕವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ತಕ್ಕಂತೆ ತಂತ್ರಜ್ಞಾನ ಅಭಿವೃದ್ಧಿಯಾದಾಗ ಅದನ್ನು ಅಳವಡಿಸಿಕೊಳ್ಳುವುದು ಯಾವುದೇ ಪ್ರಗತಿಶೀಲ ಸರ್ಕಾರ ಹಾಗೂ ನಾಯಕನ ಕರ್ತವ್ಯ. ಅದರಂತೆ ಕರ್ನಾಟಕದಲ್ಲಿ ಪ್ರಗತಿಶೀಲ ಸರ್ಕಾರವಿದೆ ಎಂಬುದಕ್ಕೆ ಈ ಸಂಸ್ಥೆ ಉದಾಹರಣೆ. 30 ಕೋಟಿ ರೂ. ಸರ್ಕಾರದ ಅನುದಾನದಲ್ಲಿ ಸಂಸ್ಥೆ ಕೆಲಸ ಮಾಡಲಿದೆ ಎಂದರು.
ಈಗಾಗಲೇ ಈ ಸಂಸ್ಥೆಯಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 28 ವರ್ಷದ ಸೈನಿಕನಿಗೆ ಅಂಗಾಂಗ ಕಸಿ ಮಾಡಿ ಆ ಸೈನಿಕನನ್ನು ಮತ್ತೆ ಗಡಿ ಕಾಯಲು ಕಳುಹಿಸಿದ ಕೆಲಸ ಆಗಿದೆ. ಈ ಯಶಸ್ಸಿನ ಕತೆಯನ್ನು ಎಲ್ಲೆಡೆ ಬಿತ್ತರಿಸಬೇಕಿದೆ ಎಂದರು.

ಬೆಂಗಳೂರಿನಲ್ಲಿ ಆರೋಗ್ಯದ ಕೊರತೆ ತುಂಬಾ ಇದೆ. ಎಲ್ಲೆಡೆಯೂ ಇಂತಹ ಮಾದರಿ ಆಸ್ಪತ್ರೆಗಳು ಆಗಬೇಕಿದೆ. ದಾನಿಗಳು ಮುಂದೆ ಬಂದರೆ ಸರ್ಕಾರ ಇಂತಹ ಆಸ್ಪತ್ರೆಗಳಿಗೆ ಜಾಗ ಸೇರಿದಂತೆ ಎಲ್ಲ ನೆರವು ನೀಡುವುದಾಗಿ ಹೇಳಿದರು.
ಮನುಷ್ಯನ ದೊಡ್ಡ ಗುಣ ಉಪಕಾರ ಸ್ಮರಣೆ, ಸಮಾಜ ಎಲ್ಲ ಕೊಟ್ಟಿದೆ ಅದನ್ನು ಮತ್ತೆ ಸಮಾಜಕ್ಕೆ ವಾಪಸ್ ಕೊಟ್ಟಿದ್ದಾರೆ ಎಂದು ಆಸ್ಪತ್ರೆಗಳಿಗೆ ನೆರವಾದ ಸಂಸ್ಥೆ ಮತ್ತು ಕಂಪನಿಗಳ ಮುಖ್ಯಸ್ಥರ ಕಾರ್ಯವನ್ನು ಬಸವರಾಜ ಬೊಮ್ಮಾಯಿ ಅವರು ಶ್ಲಾಘಿಸಿ ಈ ಕಂಪನಿಗಳಿಗೆ ಸಹಕಾರ ಕೊಡುವುದು ಸರ್ಕಾರದ ಕೆಲಸ. ನಾವು ಮಾಡುವ ಕೆಲಸ ನಮ್ಮನ್ನು ಬೆಳಸುತ್ತದೆ. ಹುಟ್ಟುತ್ತಲೇ ಯಾರೂ ದೊಡ್ಡವರಲ್ಲ. ಇಲ್ಲಿ ನಡೆದಿರುವ ಕೆಲಸ ಎಲ್ಲರಿಗೂ ಪ್ರೇರಣೆ ಎಂದರು.
ಕೇಂದ್ರದ ಆರೋಗ್ಯ ಸಚಿವರಾದ ಡಾ. ಮನ್ಸುಖ್ ಎಲ್ ಮಾಂಡವಿಯಾ ಎಲ್ಲರಿಗೂ ಸಹಕಾರ ನೀಡುತ್ತಿದ್ದಾರೆ. ಕೇಂದ್ರದ ಸಚಿವರಾಗಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಕೋವಿಡ್ ಲಸಿಕೆಗೆ ಬೇಡಿಕೆ ಇಟ್ಟಾಗ 1 ಕೋಟಿ ಅಲ್ಲ, ಒಂದೂವರೆ ಕೋಟಿ ಲಸಿಕೆ ನೀಡಿ ನಮಗೆ ಟಾರ್ಗೆಟ್ ನಿಗದಿ ಮಾಡಿದರು. ಲಸಿಕೆ ನೀಡದಿದ್ರೆ ರಾಜ್ಯದಲ್ಲಿ ಶೇ. 80ರಷ್ಟು ಗುರಿಯಾಗುತ್ತಿರಲಿಲ್ಲ ಎಂದರು.

ಪ್ರಧಾನಿ ಮೋದಿ ಅವರು ಸಚಿವ ಡಾ. ಮನ್ಸುಖ್ ಎಲ್ ಮಾಂಡವಿಯಾ ಅವರಿಗೆ ಜನರ ಆರೋಗ್ಯ ಕಾಪಾಡುವುದು ಹಾಗೂ ಆರೋಗ್ಯ ಕಾಪಾಡಲು ಅಗತ್ಯವಾದ ಆಹಾರ ಬೆಳೆಯುವ ರೈತನ ಬೆಳೆಗೆ ವಿಟಮಿನ್ ಒದಗಿಸುವ ಗುರುತರ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರದ ಆರೋಗ್ಯ ಹಾಗೂ ರಾಸಾಯನಿಕ ಗೊಬ್ಬರ ಸಚಿವ ಡಾ. ಮನ್ಸುಖ್ ಎಲ್ ಮಾಂಡವಿಯಾ, ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಂಸದ ಪಿ.ಸಿ ಮೋಹನ್, ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















