ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಗ್ಯಾರೆಂಟಿಗಳನ್ನು ಜಾರಿ ಮಾಡುವ ಮೂಲಕ ಜನರ ಕೈಲಿ ಭಿಕ್ಷಾ ಪಾತ್ರೆಯಿದ್ದರೆ, ತನ್ನ ವೋಟಿನ ಜೋಳಿಗೆ ತುಂಬುತ್ತದೆ ಎಂಬ ದುಷ್ಟ ಬುದ್ದಿಯನ್ನು ಕಾಂಗ್ರೆಸ್’ನದ್ದಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ HDKumaraswamy ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪಂಚರತ್ನಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ರೂಪಿಸಿದ್ದ ಪಂಚಸೂತ್ರಗಳು. ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ಶಾಶ್ವತ ಆರ್ಥಿಕ ವೈಕಲ್ಯರನ್ನಾಗಿಸುವ ತಾತ್ಕಾಲಿಕ ತಂತ್ರಗಳಷ್ಟೇ ಎಂದು ಚಾಟಿ ಬೀಸಿದ್ದಾರೆ.
75 ವರ್ಷಗಳಿಂದಲೂ ಇದನ್ನೇ ಮಾಡಿದೆ. ಜನರ ಕೈಲಿ ಭಿಕ್ಷಾಪಾತ್ರೆ ಇದ್ದರೆ, ವೋಟಿನ ಜೋಳಿಗೆ ಭರ್ತಿ ಆಗುತ್ತದೆ ಎನ್ನುವ ದುಷ್ಟಬುದ್ಧಿ ಇವರದ್ದು. ಜನರು ಸ್ವಾವಲಂಭಿಗಳಾಗಿ ಗೌರವಯುತ ಜೀವನ ನಡೆಸಬೇಕು ಎನ್ನುವ ಹಂಬಲ ನನ್ನದಾಗಿತ್ತು. ಡೂಪ್ಲಿಕೇಟ್ ಸಿಎಂ ಸಹೋದ್ಯೋಗಿ ಸಚಿವರೊಬ್ಬರೇ ಹೇಳಿದ್ದರಲ್ಲ. ಎಲೆಕ್ಷನ್ ಗೆಲ್ಲಬೇಕಾದರೆ ಗ್ಯಾರಂಟಿಗಳಂಥ ಚೀಫ್ ಗಿಮಿಕ್ ಮಾಡಲೇಬೇಕು ಎಂದು. ಗ್ಯಾರಂಟಿಗಳು ಚೀಫ್ ಗಿಮಿಕ್ ಎನ್ನುವ ಆ ಸಚಿವರ ಮಾತಿಗೆ ನನ್ನ ಸಹಮತವಿದೆ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ
ಕೋಟಿ ರೂಪಾಯಿ ಕೊಟ್ಟು ಗ್ಯಾರಂಟಿ ಸ್ಕೀಮುಗಳ ಬಗ್ಗೆ ಸಮೀಕ್ಷೆ ಮಾಡಿಸಿಕೊಂಡರಲ್ಲ, ಚನ್ನಪಟ್ಟಣದ ಜನರು ಏನು ಹೇಳಿದ್ದಾರೆಯೇ ಎಂಬ ಮಾಹಿತಿ ಅದರಲ್ಲಿ ಇದೆಯಾ? ಕೂಸು ಹುಟ್ಟುವ ಮುನ್ನವೇ ಕುಲಾವಿಯೇ? ಗ್ಯಾರಂಟಿ ಜಾರಿಗೆ ಮೊದಲೇ ಸಮೀಕ್ಷೆ ಪ್ಲಾನ್ ಮಾಡಿಕೊಂಡಿದ್ದರಲ್ಲ, ಯಾಕೆ? ನಿಮ್ಮ ಯೋಗ್ಯತೆಗೆ ಇನ್ನು ಯುವನಿಧಿ ಬಂದೇ ಇಲ್ಲ. ಅದು ಬರುತ್ತೋ ಇಲ್ಲವೋ ಗೊತ್ತಿಲ್ಲ. ಅದನ್ನು ಚನ್ನಪಟ್ಟಣದ ಜನರನ್ನೇ ಕೇಳಬೇಕೆ? ಇವರ ರಾಜಕೀಯ ಸ್ವಾರ್ಥಕ್ಕೆ ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳನ್ನು ಬಲಿಗೊಟ್ಟು, ರಾಮನಗರ ಹೆಸರಿಗೇ ಕೊಕ್ ಕೊಡಲು ಹೊರಟಿದ್ದಾರೆ. ಆಯ್ಯೋ ದೇವೆರೇ, ಈ ಸರಕಾರದಲ್ಲಿ ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post