ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವಂಬರ್ ತಿಂಗಳಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಮುಂದಿನ 5 ವರ್ಷಗಳಲ್ಲಿ ಶೇ. 75 ರಷ್ಟು ಅನುಷ್ಠಾನಕ್ಕೆ ಬರಲಿದ್ದು, ಯಾವುದೇ ರೀತಿಯ ಅನುಮಾನ ಬೇಡ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ Minister Murugesh Nirani ಅವರು ಭರವಸೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಾವು ಕೇವಲ ವೈಭವೀಕರಣಮಾಡಿಕೊಳ್ಳಲು ಅಥವಾ ಬಂಡವಾಳ ಹೆಚ್ಚಿಸಿಕೊಳ್ಳಲು ಇಲ್ಲವೇ ಅಂಕಿ-ಸಂಖಿಗಳನ್ನು ತೋರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿಲ್ಲ. ಯೋಜನೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸುವವರಿಗೆ ಮಾತ್ರ ಅನುಮೋದನೆ ನೀಡಿದ್ದೇವೆ. ಇನ್ನು 5 ವರ್ಷದೊಳಗೆ ಶೇ. 75ರಷ್ಟು ಎಂಒಯು ಅನುಷ್ಠಾನಕ್ಕೆ ಬರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Also read: ಉದ್ದಿಮೆದಾರರಿಗೆ ತೆರಿಗೆ ಇಲಾಖೆಯಲ್ಲಾಗುವ ಬದಲಾವಣೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಅಗತ್ಯ
ರಾಜ್ಯದಲ್ಲಿ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದರೂ ನಾವು ಅವರ ಜೊತೆ ಎಂಒಯು ಮಾಡಿಕೊಂಡಿಲ್ಲ. ಈಗಾಗಲೇ ಮಾಡಿಕೊಂಡಿರುವ ತಿಳುವಳಿಕೆ ಒಪ್ಪಂದ ಪತ್ರಕ್ಕೆ (ಎಂಒಯು) ಆದ್ಯತೆ ಕೊಡುತ್ತೇವೆ. ಕೇವಲ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು .

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಶೇ. 90ರಷ್ಟು ಟಯರ್-2 ಮತ್ತು 3 ನಗರಗಳಲ್ಲಿ ಹೂಡಿಕೆಯಾಗಿವೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಗಮನಹರಿಸಿದ್ದೇವೆ ಎಂದರು.

ಕೆಲವು ಕಡೆ ರೈತರು ಸ್ವಯಂಪ್ರೇರಿತರಾಗಿ ಬಂದು ತಮ್ಮ ಜಮೀನನ್ನು ಮಾರುಕಟ್ಟೆ ದರದಂತೆ ಖರೀದಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಕೆಲವು ಕಡೆ ಜಮೀನೇ ಇಲ್ಲದ ರೈತರು ಪ್ರತಿಭಟನೆ ನಡೆಸುತ್ತಾರೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇದೆ. ರಾಜ್ಯದಲ್ಲಿ ಇದುವರೆಗೂ ನಾವು ಕೈಗಾರಿಕೆಗಳಿಗೆ ಕೇವಲ ಶೇ. 0.61 ಭೂಮಿಯನ್ನು ಮಾತ್ರ ಬಳಸಿಕೊಂಡಿದ್ದೇವೆ ಎಂದು ಅಂಕಿ ಸಂಖ್ಯೆಗಳನ್ನು ವಿವರಿಸಿದರು.

ಮಂಗಳವಾರ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ನಡೆದ 136ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 59 ಯೋಜನೆಗಳಿಂದ 20627.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಇದರಿಂದ 80764 ಜನರಿಗೆ ಉದ್ಯೋಗಾವಕಾಶ ಲಭಿಸಲಿವೆ ಎಂದು ನಿರಾಣಿ ತಿಳಿಸಿದರು.
50 ಕೋಟಿಗೂ ರೂ. ಹೆಚ್ಚು ಬಂಡವಾಳ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮದ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 852.06 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 3560 ಜನರಿಗೆ ಉದ್ಯೋಗ ಅವಕಾಶ ಲಭಿಸಲಿದೆ.
15 ಕೋಟಿ ರೂ. 50 ಕೋಟಿ ರೂ. ಯೊಳಗಿನ 48 ಹೊಸ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದ್ದು, ಒಟ್ಟು 923.9 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 4444 ಜನರಿಗೆ ಉದ್ಯೋಗಗಳು ಸಿಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ನಾಲ್ಕು ಯೋಜನೆಗಳಿಂದ 852.73 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 1460 ಜನರಿಗೆ ಉದ್ಯೋಗ ಅವಕಾಶ ಸಿಗಲಿವೆ ಎಂದು ವಿವರಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆಯನ್ನು ತಗ್ಗಿಸಿ ಎಥನಾಲ್ ಬಳಕೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ, ಇದರಿಂದ ಪರಿಸರ ಮತ್ತು ನಾಗರೀಕ ಸಮಾಜದ ಮೇಲೆ ಉಂಟಾಗುತ್ತಿದ್ದ ದುಷ್ಪರಿಣಾಮಗಳು ಕಡಿಮೆ ಆಗಲಿವೆ ಎಂದು ನಿರಾಣಿ ಅವರು ತಿಳಿಸಿದರು.
ಈಗಾಗಲೇ ಡೀಸೆಲ್ ಇಂಜಿನ್ ವಾಹನಗಳ ಅಮದನ್ನು ಬಂದ್ ಮಾಡಲಾಗಿದೆ. ವಾಹನಗಳನ್ನು ಬಯೋ ಫ್ಯೂಲ್ ಅಂದರೆ ಸ್ಥಳೀಯವಾಗಿ ದೊರೆಯುವ ಎಥನಾಳ ತ್ಯಲದಿಂದ ವಾಹನಗಳನ್ನು ಚಾಲನೆ ಮಾಡಲು ಒತ್ತು ನೀಡಲಾಗುವುದು, ಎಂದರು.
ಅಮದನ್ನು ಕಡಿಮೆ ಮಾಡಿ ರಫ್ತು ಹೆಚ್ಚಿಸಲು ಒತ್ತು ನೀಡುತ್ತಿದ್ದು ಮೇಕ್ ಇನ್ ಇಂಡಿಯಾಗೆ ಅನುವು ಮಾಡಿ ಕೊಡುವುದರಿಂದ ರಾಜ್ಯ ಇಡೀ ಪ್ರಪಂಚದಲ್ಲಿ ಬಲಿಷ್ಠವಾಗಿ ಹೊರ ಹಿಮ್ಮಲಿದೆ ಎಂದು ಹೇಳಲು ಹರ್ಷಿಸುತ್ತೇನೆ.ಸರ್. ಎಂ. ವಿಶ್ವೇಶ್ವರಯ್ಯ ಅವರ ಕನಸನ್ನು ಸಾಕಾರ ಮಾಡುವತ್ತ ನಮ್ಮ ಸರ್ಕಾರ ಸಾಗಿದೆ, ಎಂದು ಹೇಳಿದರು ನಿರಾಣಿ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಸಕಾರಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿ ಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಪಂಚಮಸಾಲಿ ಸಮುದಾಯದ ಜೊತೆಗೆ ವೀರಶೈವ, ಲಿಂಗಾಯತ ಸಮುದಾಯದಲ್ಲಿರುವ ಸಣ್ಣ ಸಣ್ಣ ಸಮುದಾಯಕ್ಕೂ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ. ಈಗಲೂ ನಮ್ಮ ಸಮುದಾಯದಲ್ಲಿ ಕೆಲವರಿಗೆ ಸೂಕ್ತವಾದ ಸಂವಿಧಾನ ಬದ್ಧ ಸ್ಥಾನಮಾನಗಳು ಸಿಕ್ಕಿಲ್ಲ. ನನ್ನ ಪ್ರಕಾರ ಸಮಸ್ತ ವೀರಶೈವ ಸಮುದಾಯಕ್ಕೆ ಮೀಸಲಾತಿ ಅಗತ್ಯ ಎಂದು ನಿರಾಣಿ ಅಭಿಪ್ರಾಯಪಟ್ಟರು. ಹಿಂದುಳಿದ ವರ್ಗಗಳ ಆಯೋಗವರದಿ ಕೊಟ್ಟ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಮಿಷನ್ ಆರೋಪ ರಾಜಕೀಯ ಆರೋಪ ಕುರಿತಾಗಿ ಮಾತನಾಡಿದ ನಿರಾಣಿ ಅವರು ಇದೊಂದು ಆಧಾರರಹಿತ ಆರೋಪ. ಇದರಲ್ಲಿ ಸತ್ಯಾಂಶ ಇಲ್ಲ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ಮಾಧ್ಯಮ ಸಂವಾದದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ಪ್ರಧಾನ ಕರ್ಯದರ್ಶಿ ಬಿ.ಪಿ.ಮಲ್ಲಪ್ಪ , ಖಜಾಂಚಿ ಮೋಹನ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post