ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕದ ಇತಿಹಾಸದಲ್ಲಿ ಎಸ್.ಸಿ/ ಎಸ್.ಟಿ ಮೀಸಲಾತಿಯನ್ನು ಹೆಚ್ಚಿಗೆ ಮಾಡುವ ಕೆಲಸವನ್ನು ಯಾವ ಸರ್ಕಾರ ಕೂಡ ಕೈಗೊಂಡಿರಲಿಲ್ಲ. ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಅವರು ಇಂದು ರಾಯಚೂರು ತಾಲ್ಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ಭಯಗೊಂಡಿದೆ
ಕಳೆದ 50 ವರ್ಷಗಳಿಂದ ಮೀಸಲಾತಿ ಹೆಚ್ವಿಸಲು ಬೇಡಿಕೆ ಇತ್ತು. ಕಾಂಗ್ರೆಸ್ ಅಧಿಕಾರವಿದ್ದಾಗ ಏನೂ ಮಾಡಲಿಲ್ಲ. ನಾನು ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಈ ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಈಗ ಅವರಿಗೆ ಭಯ ಹುಟ್ಟಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಈ ದಿಟ್ಟ ಕ್ರಮ ತೆಗೆದುಕೊಂಡಿರುವುದರಿಂದ ಅವರ ಮತ ಬಿಜೆಪಿ ಗೆ ಹೋಗುತ್ತದೆ ಎಂದು ಭಯಗೊಂಡು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಯಾರೂ ಅಪಸ್ವರ ಎತ್ತಬಾರದು
ಎಸ್.ಸಿ/ಎಸ್.ಟಿ ಸಮುದಾಯಕ್ಕೆ ತೆಗೆದುಕೊಂಡಿರುವ ಈ ಕ್ರಮದಲ್ಲಿ ಯಾರೂ ಕೂಡ ಅಪಸ್ವರದ ಮಾತುಗಳನ್ನು ಆಡಬಾರದು. ಕಳೆದ 50-60 ವರ್ಷ ಆ ಜನಾಂಗ ನೊಂದಿದೆ. ಅವರಿಗೆ ಅಧಿಕಾರ, ನ್ಯಾಯ ಸಿಕ್ಕಿಲ್ಲ. ಇಂಥ ಸಂದರ್ಭದಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ಯಾರೂ ಕೂಡ ಅಪಸ್ವರ ಎತ್ತಬಾರದು. ಯಾರು ಅಪಸ್ವರ ಎತ್ತುತ್ತಾರೋ ಅವರು ಎಸ್.ಸಿ. ಎಸ್..ಟಿ ವಿರೋಧಿಗಳು ಎಂದರು.
ಸೂಕ್ತ ನಿರ್ಣಯ
ಹಲವಾರು ಜನಾಂಗಗಳು ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಕೆಲವರು ಎಸ್.ಟಿ ಗೆ ಸೇರಿಸಬೇಕೆಂದೂ, ಕೆಲವರು 3ಬಿ ಯಿಂದ 2 ಎ ಗೆ ಸೇರಿಸಬೇಕೆಂತಲೂ, ಕೆಲವರು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈಗ ಶಿಕ್ಷಣ ಮತ್ತು ಉದ್ಯೋಗದ ಜಾಗೃತಿಯಾಗಿರುವುದರಿಂದ ಜನರ ಆಶೋತ್ತರಗಳು ಎಲ್ಲಾ ಸಮುದಾಯಗಳಲ್ಲಿ ಹೆಚ್ಚಾಗಿದೆ. ಎಲ್ಲಕ್ಕೂ ಕಾನೂನಿನಡಿ ಆಯೋಗಗಳು ಶಿಫಾರಸ್ಸು ಮಾಡುವುದರನ್ವಯ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
Also read: ನಮ್ಮ ಸಂಸ್ಕೃತಿಯ ಎಲ್ಲಾ ಆಯಾಮಗಳಲ್ಲೂ ಸೃಜನಾತ್ಮಕತೆಯಿದೆ: ರಘುಪತಿ ಎನ್. ಶರ್ಮಾ
ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ
ಜನಸಂಕಲ್ಪ ಯಾತ್ರೆ ನಿರಂತರವಾಗಿ ಡಿಸೆಂಬರ್ ವರೆಗೆ ನಡೆಯುತ್ತಿದೆ. ಎಲ್ಲ್ಲಾ ಜಿಲ್ಲೆಗಳಲ್ಲಿ 50 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ಬರುವ ದಿನಗಳಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಮುಟ್ಟುವ ರೀತಿಯಲ್ಲಿ ಎಲ್ಲರೂ ಸೇರಿ ಸಂಕಲ್ಪವನ್ನು ಮಾಡಿ ಜನರ ಕಲ್ಯಾಣ ಕಾರ್ಯಕ್ರಮವನ್ನು ಮುಂದಿಟ್ಟು ನಾವು ಜನಾದೇಶವನ್ನು ಪಡೆಯುವ ಈ ಸಂಕಲ್ಪ ಯಾತ್ರೆ ರಾಯಚೂರಿನಿಂದ ಪ್ರಾರಂಭವಾಗುತ್ತಿದೆ. ಜನಸಂದಣಿ ಎಷ್ಟು ದೊಡ್ಡದಿದೆ, ಉತ್ಸವ ಎಷ್ಟು ದೊಡ್ಡದಿದೆ ಎಂದು ಕಾಣಬಹುದು. ಇದು ಬರುವ ದಿನಗಳಲ್ಲಿ 2023 ಕ್ಕೆ ಭಾರತೀಯ ಜನತಾ ಪಕ್ಷ ಮತ್ತೆ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ಜನಪರವಾದ ಕೆಲಸ ಮಾಡುತ್ತದೆ ಎನ್ನುವುದರ ಸಂದೇಶ ನೀಡುತ್ತಿದೆ ಎಂದು ಭಾವಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜೋಡೋ ಯಾತ್ರೆಗೂ ಜನಸಂಕಲ್ಪ ಯಾತ್ರೆಗೂ ಸಂಬಂಧವಿಲ್ಲ. ಅವರು ಕಾಂಗ್ರೆಸ್ ಜೋಡೋ ಯಾತ್ರೆಯಲ್ಲಿ ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಆದರೆ ನಮ್ಮದು ಜನಸಂಕಲ್ಪ, ಜನಸಂಪರ್ಕ ಮಾಡುವ ಯಾತ್ರೆ ಎಂದರು.
ಡಿ.ಕೆ.ಶಿವಕುಮಾರ್ ಜನಸಂಕಲ್ಪ ಯಾತ್ರೆಯನ್ನು ಬಿಜೆಪಿ ಸೋಲುವ ಭಯದಿಂದ ಕೈಗೊಂಡಿದೆ ಎಂಬ ಹೇಳಿಕೆಗೆ ಪ್ರತಿಕಿಯೆ ನೀಡಿ ಈಗ ಅವರು ಜೋಡೋ ಯಾತ್ರೆಯನ್ನು ಸೋಲುವ ಭಯದಿಂದಲೇ ಕೈಗೊಂಡಿದ್ದಾರೆಯೇ ? ರಾಹುಲ್ ಗಾಂಧಿ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ರಾಯಚೂರಿಗೆ ಏಮ್ಸ್
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಮುಂದಿನ ವಾರ ದೆಹಲಿಗೆ ಹೋಗುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಹಿಂದುಳಿದ ಜಿಲ್ಲೆಗೆ ಏಮ್ಸ್ ಸ್ಥಾಪನೆಗೆ ಕ್ರಮವಹಿಸಲಾಗುವುದು. ಏಮ್ಸ್ ತರುವಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ನನಗೆ ವಿಶ್ವಾಸವಿದೆ ಎಂದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post