ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ ಸಂಗ್ರಹಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಈ ತಿಂಗಳಾಂತ್ಯದೊಳಗೆ ನಿಗದಿತ ಗುರಿಯನ್ನು ಸಾಧಿಸಲು ಮುಂದಾಗಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ #Minister Priyanka Kharge ಅಧಿಕಾರಿಗಳಿಗೆ ಸೂಚಿಸಿದರು.
ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮ ಪಂಚಾಯತಿಗಳ ತೆರಿಗೆಯನ್ನು ಸಮರ್ಪವಾಗಿ ಸಂಗ್ರಹಿಸುವ ಅನಿವಾರ್ಯತೆ ಇದೆ ಎಂದೂ ಸಚಿವರು ಹೇಳಿದರು.
ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಿಂಗಳಿಗೊಮ್ಮೆ ತೆರಿಗೆ ಸಂಗ್ರಹ ಸಲುವಾಗಿಯೇ ಸಭೆ ನಡೆಸಬೇಕೆಂದು ಸಚಿವರು ಸೂಚಿಸಿದರಲ್ಲದೆ, ಆದ್ಯತಾ ಕೆಲಸಗಳತ್ತ ವಿಶೇಷ ಗಮನ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸಬೇಕೆಂದು ಹೇಳಿದರು.
ಸಚಿವರು ಇಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಮ್ಮೇಳನ ನಡೆಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ವಿಮರ್ಶಿಸಿದರು.
Also read: ಪ್ರಗತಿ ಪರಿಶೀಲನೆ | ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವೀಡಿಯೋ ಸಂವಾದ
ಗ್ರಾಮಸಭೆಗಳನ್ನು ನಡೆಸುವಲ್ಲಿ ಕೆಲವು ಗ್ರಾಮ ಪಂಚಾಯತಿಗಳು ಆಸಕ್ತಿ ತೋರದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು ಸೋಷಿಯಲ್ ಆಡಿಟ್ ಆಗದೆ ಅನುದಾನ ನಿರೀಕ್ಷಿಸಲು ಸಾಧ್ಯವಿಲ್ಲ, ಇದರಿಂದ ಗ್ರಾಮಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಹೇಳಿದ ಸಚಿವರು ಗ್ರಾಮಸಭೆಗಳನ್ನು ನಡೆಸಲು ಸೂಕ್ತ ನಿರ್ದೇಶನ ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಲಜೀವನ್ ಮಿಷನ್ ಕಾರ್ಯಕ್ರಮದಡಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ಕಳಪೆ ಸಾಮಗ್ರಿಗಳ ಬಳಕೆ ಮಾಡದಂತೆ ಹಾಗೂ ಗುಣಮಟ್ಟವಿಲ್ಲದ ಕಾಮಗಾರಿಗಳು ನಡೆಯದಂತೆ ತಡೆಯಬೇಕೆಂದು ಸಚಿವರು ಹೇಳಿದರಲ್ಲದೆ, ಗ್ರಾಮೀಣ ಜನರ ಮನೆ ಮನೆಗೆ ನೀರು ತಲುಪಿಸುವ ಈ ಯೋಜನೆಯಲ್ಲಿ ಸರ್ಕಾರದ ಹಣ ಸಮರ್ಪವಾಗಿ ಬಳಕೆಯಾಗುವಂತೆ ಎಚ್ಚರವಹಿಸಬೇಕಾಗಿರುವುದು ಅಧಿಕಾರಿಗಳ ಹೊಣೆಗಾರಿಕೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಘೋಷಿಸಿದ ಕಲ್ಯಾಣಪಥ ಯೋಜನೆಯನ್ನು ಈ ತಿಂಗಳು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದೂ ಸಚಿವರು ಸಭೆಯಲ್ಲಿ ಪ್ರಕಟಿಸಿದರು.
ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿ ಸೂಚಿಸಿರುವ ಮಾನದಂಡಗಳಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕೆಂದು ನಿರ್ದೇಶನ ನೀಡಿದ ಸಚಿವರು ಮಾನದಂಡಗಳನ್ನು ಬದಲಿಸಿ ಕಾಮಗಾರಿಗಳನ್ನು ಕೈಗೊಳ್ಳುವ ಎಂಜನಿಯರುಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಈಚೆಗೆ ಬೆಂಗಳೂರಿನಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ರಾಜ್ಯ ಮಟ್ಟದ ಶೃಂಗಸಭೆಯಲ್ಲಿ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು, ಅದರಂತೆ ಜಿಲ್ಲಾ ಮಟ್ಟದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಜಿಲ್ಲೆಯ 19 ಗ್ರಾಮ ಪಂಚಾಯತಿಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳಲು ಸೂಚಿಸಲಾಗಿತ್ತು, ಈ ಬಗ್ಗೆ ಯಾವುದೇ ಕ್ರಮ ಆಗಿಲ್ಲ ಎಂಬುದನ್ನು ನೆನಪಿಸಿದ ಸಚಿವರು ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post