ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಮೆರಿಕದ San Jose ನಗರದಲ್ಲಿ 2025ರ ಜುಲೈ 3, 4 ಮತ್ತು 5 ರಂದು ಅದ್ದೂರಿ ವಿಶ್ವ ಒಕ್ಕಲಿಗರ ಸಮ್ಮೇಳನ ಆಯೋಜಿಸಲಾಗಿದೆ.
ಅಮೆರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ ಶಾಖೆಯ (VPA-West) ಆಶ್ರಯದಲ್ಲಿ ಅತ್ಯಂತ ಸುಂದರವಾದ ‘ಸ್ಯಾನ್ ಹೋಸೆ ಮೆಕೆನ್ರಿ ಕನ್ವೆನ್ಷನ್ ಸೆಂಟರ್’ನಲ್ಲಿ ಸಮ್ಮೇಳನ ಜರುಗಲಿದೆ.
ಜಗತ್ತಿನಾದ್ಯಂತ ವಿಸ್ತರಿಸಿರುವ ಒಕ್ಕಲಿಗ ಸಮುದಾಯವನ್ನು ಒಂದುಗೂಡಿಸುವ ಉದ್ದೇಶವನ್ನು ಹೊಂದಿರುವ ಈ ಸಮ್ಮೇಳನದಲ್ಲಿ, ಸಮುದಾಯದ ಹಿರಿಯ ಸ್ವಾಮೀಜಿಗಳು, ಪ್ರಪಂಚದಾದ್ಯಂತ ಇರುವ ಉದ್ಯಮಿಗಳು, ಕೇಂದ್ರ ಹಾಗೂ ರಾಜ್ಯದ ಸಚಿವರು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಭಾಗವಹಿಸಲಿದ್ದಾರೆ.
ಒಕ್ಕಲಿಗರ ಸಾಧನೆ-ಪರಿಶ್ರಮಗಳ ಕುರುಹಾಗಿ ‘ಉಳುತ ಸಾಗಿಹೆವು ಜಗವೆಂಬ ಹೊಲವನು’ ಎಂಬ ಶೀರ್ಷಿಕೆಯಡಿ ಸಜ್ಜುಗೊಳ್ಳುತ್ತಿರುವ ಈ ಭವ್ಯ ಸಮ್ಮೇಳನವು ವಿಶ್ವದ ಎಲ್ಲೆಡೆಯಿಂದ ಒಕ್ಕಲಿಗರನ್ನು ಆಕರ್ಷಿಸಲಿದೆ. ಸುಮಾರು 1,000ಕ್ಕೂ ಹೆಚ್ಚು ಜನರನ್ನು ಒಗ್ಗೂಡಲಿಸಲಿದೆ. ಭಾರತ ಮತ್ತು ಅಮೆರಿಕ ದೇಶಗಳಷ್ಟೇ ಅಲ್ಲದೆ, ಯುರೋಪ್, ಆಸ್ಟ್ರೇಲಿಯಾ, ಕೆನಡಾ, ದುಬೈ ಹಾಗೂ ಇನ್ನಿತರ ಭಾಗಗಳಲ್ಲಿರುವ ಒಕ್ಕಲಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಈ ಸಮ್ಮೇಳನದ ವಿಶೇಷ.
Also read: 5.14 Lakhs registration for PM-Surya Ghar: BESCOM MD Mahantesh Bilagi
ಸಾಂಸ್ಕೃತಿಕ ಉತ್ಸವಕ್ಕೆ ಭಾರತ ಹಾಗೂ ಅಮೆರಿಕದ ಕಲಾವಿದರಿಂದ ಭರ್ಜರಿ ಮನೋರಂಜನೆಯ ಕಾರ್ಯಕ್ರಮಗಳು, ಸವಿಯಾದ ಸಾಂಪ್ರದಾಯಿಕ ಔತಣ, ಬಾಂಧವ್ಯದ ಬೆಸುಗೆಯನ್ನು ಬಲಪಡಿಸುವ ಸ್ನೇಹಕೂಟಗಳು, ಸಂಸ್ಕೃತಿ-ಸಂಪ್ರದಾಯಗಳನ್ನು ಎತ್ತಿ ತೋರಿಸುವ ಭವ್ಯ ಮೆರವಣಿಗೆ, ಮಕ್ಕಳಿಗೆ ಹಾಗೂ ಯುವಜನಾಂಗಕ್ಕೆ ಸ್ಫೂರ್ತಿ-ಸಂತೋಷ ನೀಡುವ ಅನೇಕ ಚಟುವಟಿಕೆಗಳು, ಉದ್ಯಮಶೀಲರಿಗೆ ಉತ್ತೇಜನ ನೀಡುವ ಬ್ಯುಸಿನೆಸ್ ಫೋರಂ, ಸ್ತ್ರೀ ಶಕ್ತಿಗೆ ಪೂರಕವಾದ ಮಹಿಳಾ ವೇದಿಕೆ ಹೀಗೆ ಹತ್ತು ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳ ಯೋಜನೆ ಭರದಿಂದ ಸಾಗಿದೆ.
ಅದ್ಭುತ ತಾಣ, ಅಮೋಘ ಆತಿಥ್ಯ, ಅಪೂರ್ವ ಕಾರ್ಯಕ್ರಮಗಳ ಜೊತೆಗೆ ಎಲ್ಲೆಡೆಯಿಂದ ಬರುವ ತಮ್ಮ ಬಂಧು-ಮಿತ್ರರಿಗೆ ಅಪೂರ್ವ ಸ್ವಾಗತ ಕೋರಲು ಕ್ಯಾಲಿಫೋರ್ನಿಯಾ ಒಕ್ಕಲಿಗರು ಉತ್ಸಾಹದಿಂದ ಕಾಯುತ್ತಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದ ಪ್ರಮುಖ ಆಕರ್ಷಣೆಗಳು: –
- ಉದ್ಯಮ ಸಹಕಾರ ಮತ್ತು ವೈದ್ಯಕೀಯ ಚರ್ಚೆಗಳು.
- ಉದ್ಯಮ ವಿಸ್ತರಣೆಗೆ ಸರ್ಕಾರದ ವಿವಿಧ ಯೋಜನೆಗಳ ಪರಿಚಯ ಮತ್ತು ಪ್ರಚಾರ.
- ಸಮುದಾಯದ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರದರ್ಶನ.
- ಪ್ರಗತಿಶೀಲ ಚರ್ಚೆಗಳು ಮತ್ತು ಜಾಗತಿಕ ನೆಟ್‌ವರ್ಕಿಂಗ್ ಅವಕಾಶಗಳು.
ಸಾಂಸ್ಕೃತಿಕ ವೈಭವದಿಂದ ಕೂಡಿರುವ ಈ ಸಮ್ಮೇಳನವು, ಸಮುದಾಯದ ಮುಂದಾಳತ್ವವನ್ನು ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ.
ಅಮೆರಿಕ ಹಾಗೂ ಜಗತ್ತಿನಾದ್ಯಂತ ಇರುವ ಒಕ್ಕಲಿಗ ಸಮುದಾಯದ ಎಲ್ಲಾ ಸದಸ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಯೋಜಕರ ಸಮಿತಿ ಆತ್ಮೀಯವಾಗಿ ಆಹ್ವಾನಿಸುತ್ತಿದೆ.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರು ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ https://myvpa.org/
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post