ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ವರದಿ: ಡಿ.ಎಲ್. ಹರೀಶ್
ಕೇಂದ್ರದ ಜಲಶಕ್ತಿ ಸಚಿವರು ಮೇ 7 ರಂದು ಕೃಷ್ಣಾ ಕಣಿವೆಯ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಕೂಡಲೇ ಅಧಿಸೂಚನೆ ಹೊರಡಿಸಲು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಭೆಗೆ ಪೂರಕವಾಗಿ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯದ ನಿಲುವು ಏನಿರಬೇಕೆಂದು ಚರ್ಚಿಸಲಾಗಿದೆ ಎಂದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿ -2 ದಿನಾಂಕ 30-12- 2010 ರಲ್ಲಿ ತೀರ್ಪು ನೀಡಿದ ನಂತರ 2013 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ತದನಂತರ ಈವರೆಗೆ ಕೇಂದ್ರ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರದ ನೀರಾವರಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ ನಂತರ ಸಭೆಯನ್ನು ಕರೆಯಲಾಗಿದೆ.
ಎರಡನೇ ನ್ಯಾಯಾಧಿಕರಣದ ಆದೇಶದಲ್ಲಿ 173 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಸೂಚಿಸಿದೆ. 519 ಮೀಟರ್ ಗಳಿಂದ 524 ಮೀಟರ್ ಗಳಿಗೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿದರೆ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಸಭೆಯಲ್ಲಿಯೂ ಈ ಬಗ್ಗೆ ಒತ್ತಾಯಿಸಲಾಗುವುದು ಎಂದ ಮುಖ್ಯಮಂತ್ರಿಗಳು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಕೂಡ ಅರ್ಜಿ ಹಾಕಿಕೊಂಡಿದೆ. ಅವರು ತಮ್ಮ ಪಾಲಿಗೆ ಹಂಚಿಕೆಯಾಗಿರುವದನ್ನು ಬಳಸಿಕೊಳ್ಳಲಿ . ಈ ಬಗ್ಗೆ ನಾವು ಒತ್ತಾಯ ಮಾಡಿದ್ದು, ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶ ಹೊರಡಿಸದ ಕಾರಣ 524 ಮೀಟರ್‌ಗಳಿಗೆ ಹೆಚ್ಚಿಸುವ ಕೆಲಸವನ್ನು ಮಾಡುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post