ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜಧಾನಿ ಬೆಂಗಳೂರು ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ.
ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಆರಂಭವಾದ ಗುಡುಗು ಸಹಿತ ೧೦೦ ಮಿಮಿ ಭಾರೀ ಮಳೆಗೆ ಹಲವು ಪ್ರದೇಶಗಳಲ್ಲಿ ನೆರೆ ಸಂಭವಿಸಿದೆ. ಚಂದ್ರಾ ಲೇಔಟ್, ಬಿಟಿಎಂ ಲೇಔಟ್, ಬನ್ನೇರುಘಟ್ಟ ರಸ್ತೆ, ಜಯಮಹಲ್ ರಸ್ತೆ ಮತ್ತು ದಕ್ಷಿಣ ಬೆಂಗಳೂರು ಸುತ್ತಮುತ್ತ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಬಹುತೇಕ ಕಡೆಗಳಲ್ಲಿ ಮನೆಗಳು, ಅಪಾರ್ಟ್’ಮೆಂಟ್’ನ ಬೇಸ್ ಮೆಂಟ್, ಕಚೇರಿಗಳು, ದೇವಸ್ಥಾನಗಳ ಒಳಗೆ ನೀರು ನುಗ್ಗಿದೆ. ಕಳೆದ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಬಹುತೇಕ ಕಡೆಗಳಲ್ಲಿ ಸುರಿದ ಧಾರಾಕಾರ ಮಳೆಯ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಗರದಲ್ಲಿ ಟ್ರಾಫಿಕ್ ಜಾಮ್
ಇನ್ನು, ಮಳೆ ನೀರು ಸರಿಯಾಗಿ ಹೋಗಲು ಅವಕಾಶವಿಲ್ಲದಂತೆ ಒತ್ತುವರಿಯಾದ ಪರಿಣಾಮ ರಾಜಕಾಲುವೆಗಳ ನೀರು ಹಲವು ಕಡೆ ರಸ್ತೆಗೆ ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಪ್ರಮುಖವಾಗಿ ಹಲವು ಕಡೆಗಳಲ್ಲಿ ನೀರು ತುಂಬಿಕೊಂಡಿರುವ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ.
ಸಿಎಂ ಭೇಟಿ, ಪರಿಹಾರ ಘೋಷಣೆ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Also read: ಅತಿ ಹೆಚ್ಚು ಇಳುವರಿ ಪ್ರಶಸ್ತಿ: ಹಿರೇಶಕುನ ಗ್ರಾಮದ ಪರಶುರಾಮಪ್ಪ ಸಣ್ಣಬೈಲ್‌ಗೆ ತೃತಿಯ ಸ್ಥಾನ
ಸಚಿವ ಆರ್. ಅಶೋಕ್, ಸಚಿವ ವಿ. ಮುನಿರತ್ನ, ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳೊಂದಿಗೆ ತೀವ್ರ ಹಾನಿಗೀಡಾಗಿರುವ ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ ಹತ್ತಿರದ ಸ್ಥಳಗಳು, ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 25ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ರಾಜಕಾಲುವೆ ಒತ್ತುವರಿಯಿಂದಾಗಿ ತೀವ್ರ ಮಳೆಯಾದಾಗ ಈ ರೀತಿ ಮನೆಗಳಿಗೆ ನೀರು ನುಗ್ಗುತ್ತಿದೆ. ಕಾಲುವೆ ಪಕ್ಕದಲ್ಲಿ ಮನೆ ಕಟ್ಟಿಕೊಂಡಿರುವುದರಿಂದ ಈ ರೀತಿ ಹಾನಿಯಾಗುತ್ತದೆ. ನೀರು ನುಗ್ಗಿ ಸಮಸ್ಯೆಯಾದವರಿಗೆ ಊಟ ತಿಂಡಿ, ಮನೆ ಕ್ಲೀನ್ ಮಾಡಿಕೊಡುವ ವ್ಯವಸ್ಥೆ ಮಾಡುತ್ತೇವೆ. ಈ ಅವಾಂತರಕ್ಕೆ ಏನು ಕಾರಣ ಎಂದು ಚರ್ಚಿಸಿ ಒಂದು ವರ್ಷದಲ್ಲಿ ಎಲ್ಲಾ ಸರಿಪಡಿಸುವ ಕೆಲಸ ಮಾಡುತ್ತೇವೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಇದೇ ವೇಳೆ ಮಳೆಯಿಂದಾಗಿ ಮೃತರಾದವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post