ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ #B Sarojadevi ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ತಮ್ಮ ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಿತು.
ಅಭಿನಯ ಸರಸ್ವತಿ ಸರೋಜಾದೇವಿ ಅವರ ಪುತ್ರ ಗೌತಮ್ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು. ಇದಕ್ಕೂ ಮುನ್ನ ಪೊಲೀಸರು ಕುಶಾಲ ತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಿದರು.
ದಶಾವರದಲ್ಲಿ ಸರೋಜಾದೇವಿ ಅವರ ತಾಯಿಯ ಸಮಾಧಿ ಪಕ್ಕವೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸರೋಜಾದೇವಿ ಅವರ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
ಅಂತ್ಯಸಂಸ್ಕಾರಕ್ಕೂ ಮುನ್ನ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಮೆರವಣಿಗೆ ಮೂಲಕ ತರಲಾಯಿತು. ಬಳಿಕ ಪಲ್ಲಕ್ಕಿಯಲ್ಲಿಟ್ಟು ಅವರ ಪಾರ್ಥೀವ ಶರೀರವನ್ನು ತಂದು ಅಂತ್ಯಸಂಸ್ಕಾರ ಮಾಡಲಾಯಿತು.
1955 ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಸರೋಜಾದೇವಿ ಅವರು ಅಭಿನಯದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 1955 ರಲ್ಲಿ ಸರೋಜ ದೇವಿ ಶ್ರೀ ರಾಮ ಪೂಜ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದ ಸರೋಜ ದೇವಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post