ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ದೇಶದ ಆರ್ಥಿಕತೆಯನ್ನು ಬಂಡವಾಳಶಾಹಿಗಳು ಮುನ್ನಡೆಸುತ್ತಿಲ್ಲ. ದುಡಿಯುವ ವರ್ಗ ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಪಿರಾಮಿಡ್ ನ ತಳಹಂತದಲ್ಲಿರುವವರು ದೇಶವನ್ನು ನೈಜವಾಗಿ ಮುನ್ನಡೆಸುವವರು. ಅದಕ್ಕಾಗಿ ದುಡಿಯುವ ವರ್ಗಕ್ಕೆ ಅತಿ ಹೆಚ್ವಿನ ಕಾರ್ಯಕ್ರಮ ಹಾಗೂ ಅನುದಾನವನ್ನು ನನ್ನ ಸರ್ಕಾರ ಒದಗಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದರು.
ಅವರು ಇಂದು Intellectual Forum – MAC, Karnataka, and National Intellectual Forum , MAC, ವಿಶಾಖಪಟ್ಟಣಂ, ಇವರ ವತಿಯಿಂದ ಆಯೋಜಿಸಿದ್ದ 4 ನೇ ವಿಶ್ವ ಮಾದಿಗ ದಿನಾಚರಣೆ ಹಾಗೂ ಮಾದಿಗ ಸಮುದಾಯದ ಚಿಂತಕರ ಮತ್ತು ಬುದ್ದಿಜೀವಿಗಳ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಷ್ಟಪಡುವ ಸಮುದಾಯಗಳಲ್ಲಿ ಬೆಳವಣಿಗೆ ತರುವ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣ, ಉದ್ಯೋಗ, ಮತ್ತು ಸಬಲೀಕರಣದ ಮೂಲಕ ಅವರಲ್ಲಿ ಬದಲಾವಣೆ ತರಲು ಸಾಧ್ಯ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸೈದ್ಧಾಂತಿಕವಾಗಿ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
Also read: ಬಿಜೆಪಿ ಸರ್ಕಾರದಿಂದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರು
ಸಾಮಾಜಿಕ ವ್ಯವಸ್ಥೆ ಯಾವಾಗಲೂ ಯಥಾಸ್ಥಿತಿ ಕಾಪಾಡುವ ಪ್ರಯತ್ನ ಮಾಡುತ್ತದೆ. ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳುವ ಹಿತಾಸಕ್ತಿ ವ್ಯವಸ್ಥೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದು ಪ್ರಬಲವಾಗಿತ್ತು. ಈ ವರ್ಗೀಕರಣದ ವ್ಯವಸ್ಥೆಯಲ್ಲಿ ಎಣಿ ಇರಲಿಲ್ಲ. ಕೆಳಗಿದ್ದವರಿಗೆ ಮೇಲಿರುವ ಅವಕಾಶಗಳಿರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಸಂವಿಧಾನಕಾರರು ಇದನ್ನು ಗಮನಿಸಿ ಇದಕ್ಕೆ ಚಲನಾ ಶಕ್ತಿಯನ್ನು ನೀಡಲು ಸಂವಿಧಾನದಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸಿದರು. ಈ ವರ್ಗಗಳೂ ಸಹ ಮಾನವನ ಸಹಜ ಗುಣವಾದ ಅಭಿವೃದ್ಧಿ ಹೊಂದಬೇಕು ಎಂದು ಸಂವಿಧಾನದ ಹಕ್ಕನ್ನು ನೀಡಲಾಗಿದೆ. ಸಂವಿಧಾನದ ಸದುದ್ದೇಶಗಳು ಎಷ್ಟರಮಟ್ಟಿಗೆ ಸಾಕಾರಗೊಳ್ಳುತ್ತದೆ ಎನ್ನುವುದು ಸಂವಿಧಾನವನ್ನು ಅನುಷ್ಠಾನ ಗೊಳಿಸುವವರ ಮೇಲೆ ಅವಲಂಬಿಸಿದೆ ಎಂದರು.
ಶ್ರೇಷ್ಠ ಸಂವಿಧಾನ:
ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಎಲ್ಲಾ ರಂಗಗಳ ಆಗುಹೋಗುಗಳ ತಕ್ಕ ಹಾಗೆ ನಾವು ಅದನ್ನು ಬದಲಾವಣೆ ಮಾಡುವ ಕ್ರಿಯಾಶೀಲತೆ ಸಂವಿಧಾನದಲ್ಲಿದೆ ಎಂದರು.
ದುಡಿಯುವ ವರ್ಗದ ಭವಿಷ್ಯ ರೂಪಿಸಲು ವೇದಿಕೆ ಚಿಂತಿಸಬೇಕು:
ಜಾಗತೀಕರಣ,ಉದಾರೀಕರಣ, ಖಾಸಗೀಕರಣವಾದಾಗ ಮಾರುಕಟ್ಟೆ ನಿಯಂತ್ರಣದ ನೀತಿಗಳು ಅಸ್ತಿತ್ವಕ್ಕೆ ಬಂದಿತು. ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಸಮಾನತೆ ಪಡೆಯಲು ಸಾಧ್ಯವಿಲ್ಲ. ಬಲಿಷ್ಠರು ಮಾತ್ರ ಅದರ ಲಾಭವನ್ನು ಪಡೆಯುತ್ತಾರೆ. ದಿನನಿತ್ಯ ದುಡಿಯುವ ದೊಡ್ಡ ವರ್ಗಕ್ಕೆ ಮಾರ್ಗದರ್ಶನ ಅಗತ್ಯವಿದೆ. ದುಡಿಯುವ ವರ್ಗದ ಭವಿಷ್ಯವನ್ನು ಯಾವ ರೀತಿ ರೂಪಿಸಬೇಕೆಂಬ ಚಿಂತನೆ ಮಾಡುವ ವೇದಿಕೆ ಅಗತ್ಯವಿತ್ತು . ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕ ಹಾಗೆ ಸಮಾಜವನ್ನು ಸಿದ್ಧಪಡಿಸುವ ಕೆಲಸಕ್ಕೆ ಈ ವೇದಿಕೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮುಖ್ಯವಾಹಿನಿಗೆ ಬರಬೇಕು:
ಶಿಕ್ಷಣ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಳ ಸಮುದಾಯ ಬರಬೇಕಾಗಿದೆ. ಅದರಿಂದ ನಿಮ್ಮ ಹಕ್ಕುಗಳ ಬಗ್ಗೆ ತಿಳಿಯುತ್ತದೆ, ಅವಕಾಶಗಳು ಸಿಗುತ್ತದೆ, ಉದ್ಯೋಗ ದೊರೆತು, ಸ್ವಾವಲಂಬನೆಯ , ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಡಾ: ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರು ನಮಗೆಅ ದನ್ನು ತಿಳಿಸಿಕೊಟ್ಟಿರುವುದು. ಸಂವಿಧಾನದ ಮೂಲಕ ಸಮಾನ ಹಕ್ಕುಗಳನ್ನು ನೀಡಿದ ಮಹಾ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತೊಂದೆಡೆ ದೇಶದಲ್ಲಿ ಅನ್ನಕ್ಕೆ ಕೊರತೆ ಉಂಟಾದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಅನ್ನ ಕೊಟ್ಟು ದೇಶವನ್ನು ಸ್ವಾವಲಂಬಿ, ಸ್ವಾಭಿಮಾನಿ ದೇಶವನ್ನಾಗಿಸಿದ ಬಾಬು ಜಗಜೀವನ್ ರಾಮ್. ಇವರಿಗಿಂತ ದೊಡ್ಡ ಪ್ರೇರಣೆಯನ್ನು ಪಡೆಯಲು ಸಾಧ್ಯವಿಲ್ಲ ಎಂದರು. ಇವರಿಂದ ಪ್ರೇರಣೆಯನ್ನು ಪಡೆದಿದ್ದೇನೆ. ಅಂಥ ಒಂದು ಸಮುದಾಯಕ್ಕೆ ಸೇರಿರುವುದಕ್ಕೆ ಅಭಿಮಾನ ಪಡಬೇಕು ಎಂದರು.
ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಬೇಕು:
ಮಾಕ್ಯ್ -ಕರ್ನಾಟಕ ಶಾಖೆಯು ಮೆದುಳು, ಸಮಾಜದ ಗುರುಗಳು ಹೃದಯ ಉಳಿದವರು ಶಕ್ತಿ ಕೊಡುವ ಕೈಗಳು. ಇವೆಲ್ಲಾ ಒಂದಾಗಿ ಸಮಾಜದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಬೇಕು. ಹಲವಾರು ವರ್ಷಗಳ ಆಂತರಿಕ ಮೀಸಲಾತಿಯ ಬೇಡಿಕೆ ಇದೆ. ಈ ಈ ವೇದಿಕೆ ಸಮಾಜಕ್ಕೆ ಮೀಸಲಾತಿಯೂ ಸೇರಿದಂತೆ ಮುಂದಿನ ದಾರಿಯನ್ನು ತೋರಬೇಕು. ಯಾರಿಗೂ ಅನ್ಯಾಯವಾಗದಂತೆ ಯಾವ ರೀತಿ ಮಾಡಬಹುದು ಎನ್ನುವುದರ ಬಗ್ಗೆ ಮಾರ್ಗದರ್ಶನ ಮಾಡಿದರೆ ಸಾಮಾಜಿಕ ಸಾಮರಸ್ಯದಿಂದ ನ್ಯಾಯ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದರು.
ಸರ್ಕಾರ ನಿಮ್ಮೊಂದಿಗಿದೆ:
ಶೈಕ್ಷಣಿಕವಾಗಿ ಔದ್ಯಮಿಕವಾಗಿ ಅವಕಾಶ ನೀಡಬೇಕೆನ್ನುವುದು ನನ್ನ ಗಮನದಲ್ಲಿದೆ. ಸರ್ಕಾರದ ಕಾರ್ಯಕ್ರಮಗಳಲ್ಲದೆ ಏನು ಮಾಡಬೇಕೆಂದು ಸಲಹೆ ನೀಡಿದರೆ ಅನುಷ್ಠಾನಕ್ಕೆ ಸಿದ್ದ. ಇದಕ್ಕೆ ನಮ್ಮ ಮನೆ ಮತ್ತು ಹೃದಯದ ಬಾಗಿಲುಗಳು ತೆರೆದಿದೆ. ಸರ್ಕಾರ ನಿಮ್ಮೊಂದಿಗಿದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post