ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆಗಬಾರದು ಎಂದರೆ ಜನ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ಆದರೆ ಜನ ಸಹಕರಿಸಬೇಕು. ಈಗಾಗಲೇ ಸಾಕಷ್ಟು ನಷ್ಟ ಆಗಿದೆ. ಈ ಸಂಬಂಧ ನಾಳೆ ಸಭೆ ಕರೆದಿದ್ದೇನೆ, ಮಹತ್ವದ ಚರ್ಚೆಗಳು ಆಗಲಿವೆ ಎಂದು ಹೇಳಿದರು.
ಕೊರೋನಾ ಕೈಮೀರಿ ಹೋಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಕೊರೋನಾ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲೂ ಕೊರೋನಾ ಹೆಚ್ಚಾಗುತ್ತಿದೆ. ರಾಜ್ಯದ ಗಡಿಗಳಲ್ಲಿಯೂ ಬಿಗಿಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಲಾಕ್‌ಡೌನ್ ಮಾಡಲು ಅವಕಾಶ ಕೊಡದಂತೆ ಕ್ರಮಕೈಗೊಳ್ಳುತ್ತೇವೆ ಎಂದರು.

ಇದೇ ವೇಳೆ ನಾಳೆಯಿಂದ ಅಧಿವೇಶನದಲ್ಲಿ ಕಾಂಗ್ರೆಸ್ ಸಿಡಿ ವಿಚಾರ ಪ್ರಸ್ತಾಪ ಮಾಡುತ್ತಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಸಿಡಿ ಬಗ್ಗೆ ಪ್ರಸ್ತಾಪ ಮಾಡಲಿ, ಸರ್ಕಾರದ ಗಮನ ಸೆಳೆಯಲಿ. ಒಳ್ಳೆಯ ಸಲಹೆ ಕೊಟ್ಟರೆ ಖಂಡಿತವಾಗಿ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















