ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ರಾಜ್ಯದಿಂದ ಉತ್ತರಾಖಂಡ ರಾಜ್ಯದ ಪ್ರವಾಸಕ್ಕೆ ಹಲವರು ತೆರಳಿದ್ದು, ಅವರ ರಕ್ಷಣೆಗೆ ಕಂದಾಯ ಇಲಾಖೆಯ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಕರೆಗಳು ಬಂದಿದ್ದು, ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಉತ್ತರಾಖಂಡ ರಾಜ್ಯದಲ್ಲಿ ಎರಡು ದಿನಗಳ ಕಾಲ ಸುರಿದ ದಾಖಲೆ ಪ್ರಮಾಣದ ಭಾರಿ ಮಳೆಯಿಂದಾಗಿ ಹಲವು ನದಿಗಳಲ್ಲಿ ಪ್ರವಾಹ ಮತ್ತು ಹಲವು ಭಾಗಗಳಲ್ಲಿ ಭೂಕುಸಿತದಿಂದ ಪ್ರಾಣ ಹಾನಿ, ಸಾವಿರಾರು ಮನೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ.
ಈ ಬಗ್ಗೆ ಕಂದಾಯ ಇಲಾಖೆ ಕರ್ನಾಟಕದ ಪ್ರವಾಸಿಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಅವರು ಮಾತನಾಡಿದರು.
ತಕ್ಷಣವೇ ಕಾರ್ಯ ಪ್ರವೃತ್ತವಾದ ವಿಪತ್ತು ನಿರ್ವಹಣಾ ಇಲಾಖೆ ಉತ್ತರಾಖಂಡ ಸರ್ಕಾರದ ಜೊತೆ ಸತತ ಸಂಪರ್ಕ ದಲ್ಲಿದ್ದು ರಾಜ್ಯದಿಂದ ಪ್ರವಾಸ ಕೈಗೊಂಡಿರುವ ವಿವರಗಳನ್ನು ನೀಡಿ, ಅವರ ಸುರಕ್ಷತೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿದೆ. ನಮ್ಮ ರಾಜ್ಯದ 10 ಕುಟುಂಬಗಳ ಎಲ್ಲಾ 96 ಜನರನ್ನು ಪತ್ತೆ ಹಚ್ಚಿ, ಎಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿಸಿದೆ ಎಂದರು.
ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿ ಸ್ಥಾಪಿಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲಿ ಸಿಲುಕಿರುವ ಎಲ್ಲರ ರಕ್ಷಣೆಗೆ ನಾವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಯಾರು ಭಯಪಡಬೇಕಾದ ಅಗತ್ಯವಿಲ್ಲ” ಎಂದು ಹೇಳಿದರು.
ಗಡಿಕೇಶ್ವರ ಭೂಕಂಪದ ಕುರಿತು ಮಾತನಾಡಿದ ಸಚಿವರ ಆರ್ ಅಶೋಕ್, “ಸುಮಾರು 10 ವರ್ಷದಿಂದ ಅಲ್ಲಿ ಈ ಸಮಸ್ಯೆ ಇದೆ. ನಾನೇ ಖುದ್ದು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಿ, 30ಕ್ಕೂ ಹೆಚ್ಚು ಮನೆಗಳಿಗೆ ಹೋಗಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದೇನೆ. ಎಲ್ಲರಿಗೂ ತಾತ್ಕಾಲಿಕ ಶೆಡ್ ವ್ಯವಸ್ಥೆ ಮಾಡಿದ್ದೇವೆ. ಸುಣ್ಣದ ಅಂಶ ಅಲ್ಲಿನ ಮಣ್ಣಿನಲ್ಲಿ ಹೆಚ್ಚಾಗಿರುವದರಿಂದ, ಹೆಚ್ಚು ಮಳೆಯಾದಾಗ ಈ ಸಮಸ್ಯೆ ಆಗುತ್ತದೆ ಎಂದು ವಿಜ್ಞಾನಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಇನ್ನು ಒಂದು ತಿಂಗಳ ಕಾಲ ವಿಜ್ಞಾನಿಗಳು ಸತತ ಸಂಶೋಧನೆ ಮಾಡಿ ಅಂತಿಮ ವರದಿ ನೀಡುತ್ತಾರೆ. ನಾವು ಅತ್ಯಾಧುನಿಕ ಸೆಟ್ ಲೈಟ್ ಫೋನ್ ಮೂಲಕ ಅಲ್ಲಿಯ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪರಿಹಾರ ಕಾರ್ಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಖಾತೆಗೆ ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post