ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಂಡರೆ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟವಾದ ಸಂದೇಶವನ್ನು ನೀಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಹಾಗೂ ಕರ್ನಾಟಕದಲ್ಲಿ ಕನ್ನಡಿಗರಿಗೆ ತೊಂದರೆ ತಂದರೆ ಸರ್ಕಾರ ಉಗ್ರ ಕ್ರಮ ತೆಗೆದುಕೊಳ‍್ಲುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಅವರು ಇಂದು ಆರ್.ಟಿ.ನಗರ ನಿವಾಸದ ಎದುರು ಮಾಧ್ಯಮದವರೊಂದಿಗೆ ಮಾತನಾಡಿ, ಪಠ್ಯಪುಸ್ತಕದ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನು ಕೈಬಿಡುವಂತೆ ಜೆಡಿಎಸ್ , ಕಾಂಗ್ರೆಸ್ ಅವರು ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಈ ಬಗ್ಗೆ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾಖಲೆಗಳ ಆಧಾರದ ಮೇಲೆ ಪರಿಶೀಲನೆ:
ಪೀರ್ ಪಾಷಾ ದರ್ಗಾ ಹಾಗೂ ಅನುಭವ ಮಂಟಪದ ಬಗ್ಗೆ ಬರುತ್ತಿರುವ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ.ಇಂತಹ ವಿಷಯಗಳು ಹೇಳಿಕೆಗಳ ಮೇಲೆ ಅಲ್ಲ, ದಾಖಲೆಗಳ ಆಧಾರದ ಮೇಲೆ ಪರಿಶೀಲನೆ ಆಗುತ್ತದೆ ಎಂದು ತಿಳಿಸಿದರು.
ನ್ಯಾಯಾಲಯದ ಆದೇಶದ ಪರಿಪಾಲನೆ ಆಗಬೇಕು:
ಮಂಗಳೂರಿನಲ್ಲಿ ಮತ್ತೆ ಎದ್ದಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿವಾದವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ಮೂಲಕ ಬಗೆಹರಿಸಲಾಗಿದೆ.ಹಿಜಾಬ್ ವಿವಾದಕ್ಕೆ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದೆ. ಎಲ್ಲರೂ ನ್ಯಾಯಾಲಯ ಆದೇಶವನ್ನು ಪಾಲನೆ ಮಾಡಬೇಕು. ಪಿಯುಸಿ ಗಳಲ್ಲಿ ಸಿಡಿಸಿ (ಕಾಲೇಜು ಅಭಿವೃದ್ಧಿ ಸಮಿತಿ), ಸಿಡಿಸಿ ಇಲ್ಲದಿರುವ ಕಡೆ ಕಾಲೇಜಿನ ಆಡಳಿತ ಮಂಡಳಿ ಅಥವಾ ಕಾಲೇಜಿನ ಪ್ರಾಂಶುಪಾಲರು ಆದೇಶದಂತೆ ನಡೆಯಬೇಕು. ಆದ್ದರಿಂದ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ನಿರ್ಣಯಗಳಂತೆ ನಡೆದುಕೊಳ್ಳಬೇಕು. ಸಿಂಡಿಕೇಟ್ ಅವರೂ ಕೂಡ ನ್ಯಾಯಾಲಯದ ಆದೇಶ ಪರಿಪಾಲನೆಗೆ ಒತ್ತು ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಈ ವಿವಾದಗಳಲ್ಲಿ ಸಿಲುಕದೇ ವಿದ್ಯಾರ್ಜನೆಯ ಮೇಲೆ ಗಮನಹರಿಸಬೇಕು ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post