ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರೋತ್ಸವವನ್ನು Kannada Film Festival ಹಮ್ಮಿಕೊಳ್ಳಲಾಗಿದೆ.
ಶ್ರೀಲಂಕಾ ಫಿಲಂ ಕಾರ್ಪೋರೇಷನ್ ಮತ್ತು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್, ಶ್ರೀಲಂಕಾ ಈ ಉತ್ಸವವನ್ನು ಹಮ್ಮಿಕೊಂಡಿದೆ. ಶ್ರೀಲಂಕಾದಲ್ಲಿ ಏರ್ಪಡಿಸಿರುವ ಮೊಟ್ಟಮೊದಲ ಕನ್ನಡ ಚಲನಚಿತ್ರೋತ್ಸವದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ್ Nagathihalli Chandrashekar ಅವರ ನಿರ್ದೇಶನದ ಪ್ರಶಸ್ತಿ ವಿಜೇತ ನಾಲ್ಕು ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಮೇ 2ರ ಬೆಳಗ್ಗೆ 10 ಗಂಟೆಗೆ ಶ್ರೀಲಂಕಾದ ವಾರ್ತಾ ಸಚಿವ ಡಾ. ಬಂಡೂಲಾ ಗುಣವರ್ಧನೆ ಅವರ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ಗೌರವಾನ್ವಿತ ಭಾರತೀಯ ರಾಯಭಾರಿ ಶ್ರೀ ಗೋಪಾಲ್ ಬಾಗ್ಲೆ, ಶ್ರೀಲಂಕಾದ ಭಾರತೀಯ ಸಿನೆಮಾಟೋಗ್ರಾಫರ್ಸ್ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಶ್ರೀ ವಿದುರ ವಿಕ್ರಮನಾಯ್ಕೆ ಮತ್ತು ಉನ್ನತ ಶಿಕ್ಷಣ ಸಚಿವ ಶ್ರೀ ಸುರೇನು ರಾಘವನ್ ಉಪಸ್ಥಿತರಿರುವರು.
ಚಲನಚಿತ್ರ ನಿರ್ಮಾಪಕ ಶ್ರೀ ಶಂಕರೇಗೌಡ, ಸಿನಿಮಾಟೋಗ್ರಾಫರ್ ಶ್ರೀ ಎಸ್.ಕೆ. ರಾವ್, ಪ್ರತಿಭಾನ್ವಿತ ನಟಿ ಕುಮಾರಿ ಕಾವ್ಯಾ ಶೆಟ್ಟಿ, ಪ್ರತಿಭಾನ್ವಿತ ನಟ ಶ್ರೀ ನಿರೂಪ್ ಭಂಡಾರಿ, ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಮತ್ತು ಎಚ್.ಬಿ ಮದನ್ ಗೌಡ ಅವರು ನಿಯೋಗದಲ್ಲಿದ್ದಾರೆ.

ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಚಿತ್ರ ಉದ್ಯಮದ ಹಾಗೂ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಇದರ ಜೊತೆಯಲ್ಲಿಯೇ ಪರ್ಯಾಯವಾಗಿ ಕನ್ನಡ ಚಲನಚಿತ್ರ ನಿಯೋಗದ ಸದಸ್ಯರಿಗಾಗಿ ಶ್ರೀಲಂಕಾದಲ್ಲಿನ ಸಿನೆಮಾ ಚಿತ್ರೀಕರಣ ತಾಣಗಳನ್ನು ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಪರಿಚಯಿಸಲಿದೆ.
ಶ್ರೀಲಂಕಾದ ಸಿನಿಮಾ ಉದ್ಯಮದ ಪ್ರಚಾರ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಗಾರ ಕಾರ್ಯನಿರ್ವಹಿಸಲಿದೆ. ಚಿತ್ರರಂಗದಲ್ಲಿ ಈಗಾಗಲೆ ನೆಲೆ ಕಂಡುಕೊಂಡಿರುವವರ ಮೂಲಕ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು, ಶ್ರೀಲಂಕಾದ ಸಿನಿರಂಗದ ಬೆಳವಣಿಗೆಗೆ ಸಹಕರಿಸುವ ನಿಟ್ಟಿನಲ್ಲಿ ಯುವ ಚಿತ್ರ ನಿರ್ಮಾಪಕರು ಮತ್ತು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಸಿಕ್ಕಂತಾಗಲಿದೆ.











Discussion about this post