ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶ ಕಂಡ ಏಕೈಕ ಕನ್ನಡಿಗ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರಿಗೆ HDDevegowda ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮುಖ್ಯ ದತ್ತಿ ಪ್ರಶಸ್ತಿಯಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ Nalvadi Krishnaraja Wodeyar ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಾಜಿ ಪ್ರಧಾನಿಗಳ ನಿವಾಸದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ಅವರು ಹಾಗೂ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾಜಿ ಪ್ರಧಾನಿಗಳಿಗೆ ಶುಭ ಕೋರಿದ ಎಂ.ಎನ್.ವೆಂಕಟಾಚಲಯ್ಯ ಅವರು; ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ಪ್ರಶಸ್ತಿ ದೇಶದ ಮೊದಲ ಕನ್ನಡಿಗ ಪ್ರಧಾನಮಂತ್ರಿ, ರಾಜಕೀಯ ಮುತ್ಸದ್ಧಿ ಮತ್ತು ದೂರದೃಷ್ಟಿಯ ಆಡಳಿತಗಾರ ದೇವೇಗೌಡರಿಗೆ ಸಂದಿರುವುದು ನನಗೆ ಬಹಳ ಸಂತಸ ಉಂಟು ಮಾಡಿದೆ. ಅತ್ಯುನ್ನತ ಸಾಧಕರಿಗೆ ಪ್ರಶಸ್ತಿ ಸಂದಿದೆ ಎಂದು ನುಡಿದರು.
Also read: ಪರಿಸರ ಸ್ನೇಹಿ ವಿದ್ಯುತ್ ಸ್ಥಾವರ ನಿಯೋಜನೆ ಹಿನ್ನೆಲೆ: ಎನ್ಇಎಸ್‌ಗೆ ಟಾಟಾ ಗ್ರೀನ್ ಚಾಂಪಿಯನ್ ಪ್ರಶಸ್ತಿ
ನಾಡೋಜ ಮಹೇಶ್ ಜೋಶಿ ಅವರು ಮಾತನಾಡಿ; ನಾಡಿಗೆ, ದೇಶಕ್ಕೆ ಮಹಾನ್ ಕೊಡುಗೆ ನೀಡಿದ ದೇವೇಗೌಡರಿಗೆ ನಾಲ್ವಡಿ ಪ್ರಶಸ್ತಿ ನೀಡುತ್ತಿರುವುದು ಆ ಪ್ರಶಸ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಭಿವೃದ್ಧಿಯ ಹರಿಕಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಜರಾಮರರಾದರೆ, ದೇವೇಗೌಡರು ಸ್ವಾತಂತ್ರೋತ್ತರ ಭಾರತದಲ್ಲಿ ಆರು ದಶಕಗಳ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ನಾಡು, ದೇಶದ ಅಭಿವೃದ್ಧಿಗೆ ಆವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದರು.
ಮಾಜಿ ಪ್ರಧಾನಿಗಳ ಸಂತಸ:
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇನೆ. ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಅನಾರೋಗ್ಯದ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ನಾನು ಆ ಕಾರ್ಯಕ್ರಮಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಿತ್ತು. ಹೀಗಾಗಿ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು, ನಾಡೋಜ ಮಹೇಶ್ ಜೋಶಿ ಅವರು ನನ್ನ ಮನೆಗೇ ಬಂದು ಪ್ರಶಸ್ತಿ ನೀಡಿದ್ದಾರೆ. ಇವರಿಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳು, ಕನ್ನಡದ ಕಟ್ಟಾಳುಗಳು ಹಾಜರಿದ್ದು, ಮಾಜಿ ಪ್ರಧಾನಿಗಳಿಗೆ ಶುಭ ಕೋರಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post