ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನದ ಮಾತುಕತೆ ನಡೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಆದರೆ ಆ ರೀತಿಯ ಯಾವುದೇ ಸಂಧಾನದ ಪ್ರಕ್ರಿಯೆ ನಡೆದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಪ್ರಾರಂಭದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಯಾವುದೇ ಮಾತುಕತೆ, ಸಂಧಾನದ ಅವಶ್ಯಕತೆ ಇರುವುದಿಲ್ಲ. ಮೊದಲು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ತಾಕೀತು ಮಾಡಿದ್ದರು ಎಂದು ಹೇಳಿದ್ದಾರೆ.
ಕೆಲವು ಮುಖಂಡರು ತಾವು ಮುಷ್ಕರ ನಿರತರ ಪರವಾಗಿ ಇಂದು ಮಾನ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುತ್ತಾರೆ. ಅದನ್ನು ತಾವು ಮಾಧ್ಯಮದಲ್ಲಿ ಗಮನಿಸಿದ್ದು, ತಾವು ಬೊಮ್ಮಾಯಿ ಅವರನ್ನು ಈ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಗಳ ಮಾತನ್ನು ಮೀರಿ ಈಗ ಸಂಧಾನದ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿಗಳು ತಿಳಿಸಿದಂತೆ ಮೊದಲು ಅವರು ಕರ್ತವ್ಯಕ್ಕೆ ಹಾಜರಾಗಲಿ ಎಂದು ಅವರು ತಿಳಿಸಿದ್ದಾರೆ.
ಆದರೆ ಇದನ್ನು ತಿರುಚಿ ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು ಸರಿಯಲ್ಲ. ಆದ್ದರಿಂದ, ಇನ್ನೂ ಕಾಲ ಮಿಂಚಿಲ್ಲ ಎಲ್ಲಾ ಸಾರಿಗೆ ನೌಕರ ಬಂಧುಗಳೂ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.
ಇದು ಕೋವಿಡ್ ಸಂಕಷ್ಟದ ಕಾಲ: ಮುಷ್ಕರದ ಕಾಲವಲ್ಲ
ಪ್ರಸ್ತುತ ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿರುವ ಕೋವಿಡ್ -2ನೆಯ ಅಲೆಯ ತೀವ್ರ ಅಪಾಯದ ನಡುವೆಯೂ ನಮ್ಮ ಸಾರಿಗೆ ನೌಕರ ಮಿತ್ರರು ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಮತ್ತು ನೌಕರರ ಹಿತದೃಷ್ಟಿಯಿಂದಲೂ ಸೂಕ್ತವಲ್ಲ ಎಂದಿದ್ದಾರೆ.
ಕಳೆದ ವರ್ಷ ಕೋವಿಡ್ ಸಮಸ್ಯೆ ಉಲ್ಬಣವಾದಾಗ ನಮ್ಮ ಸಾರಿಗೆ ನೌಕರರೂ ಸಹ ಕೊರೋನಾ ವಾರಿಯರ್ಸ್‌ಗಳಾಗಿ ಹಗಲಿರುಳೂ ಕೆಲಸ ಮಾಡಿದ್ದನ್ನು ಯಾರೂ ಮರೆತಿಲ್ಲ. ಸರ್ಕಾರವೂ ಈ ಸೇವೆಯನ್ನು ಗೌರವಿಸಿ ಸಾರಿಗೆ ನೌಕರರ ಸಂಕಷ್ಟಗಳಿಗೆ ಸ್ಪಂದಿಸಿತ್ತು. ಆದರೆ ಈಗ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ಅದೇ ರೀತಿ ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರೂ ಮುಷ್ಕರದ ಕಾರಣದಿಂದ ಇದೇ ಸಾರಿಗೆ ನೌಕರರಿಗೆ ಕೆಟ್ಟ ಹೆಸರು ಬರುವಂತಾಗಿ ಅವರ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗದೇ ಬಸ್ಸುಗಳ ಸುಗಮ ಸಂಚಾರಕ್ಕೆ ಕೈಜೊಡಿಸುವ ಮೂಲಕ ಮತ್ತೊಮ್ಮೆ ತಾವು ಸಾರ್ವಜನಿಕ ಸ್ನೇಹಿ ನೌಕರರು ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ. ಆದ್ದರಿಂದ ಕೂಡಲೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಜನಜೀವನ ತತ್ತರಿಸಿ ಹೋಗುತ್ತಿರುವ ದೃಶ್ಯ ನಮ್ಮ ಕಣ್ಮುಂದೆಯೇ ಇದೆ. ಇಂಥ ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಹೆಚ್ಚಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರಿ ಸಾರಿಗೆ ಸೇವೆಯ ಅಗತ್ಯ ತೀರಾ ಹೆಚ್ಚಾಗಿರುತ್ತದೆ. ಆದಾಗ್ಯೂ 13ನೆಯ ದಿನದವರೆಗೂ ಈ ಮುಷ್ಕರವನ್ನು ಮುಂದುವರೆಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸಾರಿಗೆ ನೌಕರರನ್ನು ಅವರು ಪ್ರಶ್ನಿಸಿದ್ದಾರೆ.
ಈ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ರಾಜ್ಯಸರ್ಕಾರ ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ. ಸರ್ಕಾರದ ಈ ಪ್ರಯತ್ನಕ್ಕೆ ಅನೇಕ ಇಲಾಖೆಗಳ ಸಿಬ್ಬಂದಿಗಳು ಕೈಜೋಡಿಸಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸಾರಿಗೆ ನಿಗಮಗಳ ನೌಕರರು ಮಾತ್ರ ಇಂಥ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲೂ ಈ ರೀತಿ ಮುಷ್ಕರ ನಿರತರಾದರೆ ಅವರಿಗೆ ಇದು ದೊಡ್ಡ ಕಪ್ಪು ಚುಕ್ಕೆಯಾಗುತ್ತದೆ ಎಂಬುದನ್ನು ಮರೆಯಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಇತರ ಸಚಿವ ಸಹೋದ್ಯೋಗಿಗಳೂ ಹಲವು ಬಾರಿ ಮುಷ್ಕರ ನಿರತರಿಗೆ ಮನವಿ ಮಾಡಿಕೊಂಡಿದ್ದರೂ ಸಹ ಅವರು ಮುಷ್ಕರ ನಡೆಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಇನ್ನುಳಿದ ಒಂದು ಬೇಡಿಕೆಯಾದ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಮೇ.4ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆಯು ಮುಗಿದ ನಂತರ ವೇತನ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹಿಂಸಾಕೃತ್ಯಗಳಿಂದ ಬೇಡಿಕೆ ಈಡೇರುವುದಿಲ್ಲ:
ಪ್ರಸ್ತುತ ಸಹಸ್ರಾರು ಮಂದಿ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದರ ಫಲಶೃತಿಯಾಗಿ ಈಗ ಪ್ರತಿನಿತ್ಯವೂ ಸುಮಾರು 7 ಸಾವಿರ ಸರ್ಕಾರಿ ಬಸ್ಸುಗಳು ಸಂಚರಿಸುವಂತಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳೂ ಸಂಚಾರ ಸೇವೆಗೆ ಲಭ್ಯವಾಗಿ ಒಟ್ಟಾರೆ ಬಸ್ಸುಗಳ ಸಂಚಾರದ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕೆಲವು ಮುಷ್ಕರ ನಿರತರ ಮುಖಂಡರು ಹತಾಶರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಪ್ರಚೋದಿಸುತ್ತಿರುವುದನ್ನು ಉಪಮುಖ್ಯಮಂತ್ರಿ ಸವದಿ ಖಂಡಿಸಿದ್ದಾರೆ.
ಈಗಾಗಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪ ನಿಷ್ಠಾವಂತ ಚಾಲಕರಾಗಿದ್ದ ಅವಟಿ ಅವರು ಕರ್ತವ್ಯದಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಅವರ ಜೀವವನ್ನೇ ಬಲಿ ತೆಗೆದುಕೊಂಡಿದ್ದು ಅತ್ಯಂತ ಹೀನ ಘಟನೆಯಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟಕ್ಕೀಡಾದ ಅವಟಿ ಅವರ ಕುಟುಂಬಸ್ಥರಿಗೆ ಈಗಾಗಲೇ 30 ಲಕ್ಷ ರೂಪಾಯಿ ಪರಿಹಾರ ನೀಡಿದ್ದಲ್ಲದೇ, ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸೂಕ್ತ ಉದ್ಯೋಗವನ್ನು ಸಾರಿಗೆ ನಿಗಮದಲ್ಲೇ ಕಲ್ಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ಧಾರೆ.
ಈ ಮುಷ್ಕರದ ನೆಪದಲ್ಲಿ ಈಗಾಗಲೇ ಒಟ್ಟು 110ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರಿಗೆ ನಿಗಮಗಳಿಗೆ ಅಪಾರ ಹಾನಿ ಉಂಟು ಮಾಡಲಾಗಿದೆ. ಇಂದು ಕೂಡ ಕೆಎಸ್‌ಆರ್‌ಟಿಸಿಯ 3 ಬಸ್ಸುಗಳಿಗೆ ಕನಕಪುರ-ಹಾರೋಹಳ್ಳಿ ಮಾರ್ಗದಲ್ಲಿ ಕಲ್ಲು ಹೊಡೆದು, ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು ತೀವ್ರ ಖಂಡನೀಯವಾಗಿದೆ. ಈ ರೀತಿಯ ದುಷ್ಕೃತ್ಯಗಳನ್ನು ರಾಜ್ಯ ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಈ ದುಷ್ಕರ್ಮಿಗಳು ಅರ್ಥಮಾಡಿಕೊಳ್ಳಬೇಕು. ಮುಷ್ಕರದ ನೆಪದಲ್ಲಿ ಕೆಲವರು ನೌಕರ ವರ್ಗದವರಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸಿ ಸರ್ಕಾರದ ವಿರುದ್ಧ ಹಾಗೂ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ನಮ್ಮ ಸಾರಿಗೆ ನೌಕರರ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಕಾನೂನುಬಾಹಿರ ಕೃತ್ಯಗಳಿಗೆ ಮುಂದಾಗುವವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಅಮೂಲ್ಯ ಆಸ್ತಿಯಾಗಿರುವ ಈ ಬಸ್ಸುಗಳನ್ನು ಧ್ವಂಸಗೊಳಿಸಲು ಯಾರಿಗೂ ಹಕ್ಕಿಲ್ಲ. ಅಷ್ಟೇ ಅಲ್ಲದೆ ರಾಜ್ಯ ಸಾರಿಗೆ ನೌಕರರ ಮಕ್ಕಳು ಮತ್ತು ಕುಟುಂಬದವರನ್ನು ಬೀದಿಗೆ ತಂದು ಭಿಕ್ಷಾಟನೆಗೆ ತಳ್ಳಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ಒಂದೆಡೆ ಮುಷ್ಕರ ನಿರತರು ಶಾಂತಿಯುತ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಲೇ ಮತ್ತೊಂದೆಡೆ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸುವುದು ಹಾಗೂ ಬಸ್ಸುಗಳ ಮೇಲೆ ಕಲ್ಲು ತೂರಾಟಗಳಂತಹ ಹಿಂಸಾಕೃತ್ಯಗಳನ್ನು ನಡೆಸುವುದು ನಿಜಕ್ಕೂ ಜನವಿರೋಧಿ ಬೆಳವಣಿಗೆಯಾಗಿದೆ. ಈ ಸಂಬಂಧ ಈಗಾಗಲೇ ಹಲವು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದಿದ್ದಾರೆ.
ಪ್ರಸ್ತುತ ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರ ಕೈಗೊಂಡಿರುವ ಪರ್ಯಾಯ ವ್ಯವಸ್ಥೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಕೆಲವು ಮುಷ್ಕರ ನಿರತರು ಸರ್ಕಾರದ ಪ್ರಾಮಾಣಿಕ ಸ್ಪಂದನೆಯ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವು ಪಟ್ಟಭದ್ರರು ಸರ್ಕಾರದ ವಿರುದ್ಧ ನೌಕರರನ್ನು ಎತ್ತಿಕಟ್ಟಿ ನೌಕರರಿಗೇ ಗಂಡಾಂತರ ತಂದೊಡ್ಡಲು ಹವಣಿಸುತ್ತಿದ್ದಾರೆ. ಆದರೆ ಇವರ ದಾಳಕ್ಕೆ ಯಾರೂ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಸಾರಿಗೆ ನೌಕರರನ್ನೂ ಒಳಗೊಂಡಂತೆ ನಮ್ಮೆಲ್ಲರ ಮೇಲೂ ಕೋವಿಡ್ ನಿಯಂತ್ರಿಸುವ ಸಾಮಾಜಿಕ ಜವಾಬ್ದಾರಿಯಿದೆ. ಹೀಗಿರುವಾಗ ನಾವು ನಮ್ಮ ಕರ್ತವ್ಯಕ್ಕೆ ಚ್ಯುತಿ ತರಬಾರದು. ನಮ್ಮ ಸಾರಿಗೆ ನೌಕರರು ಮತ್ತೆ ಮೊದಲಿನಂತೆ ಉತ್ಸಾಹದಿಂದ ಕರ್ತವ್ಯಕ್ಕೆ ಮರಳಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ ಈ ಸೂಕ್ಷ್ಮ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಎಂದು ಸಾರ್ವಜನಿಕರಿಂದ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗಲಿ ಎಂದು ಉಪಮಖ್ಯಮಂತ್ರಿ ಲಕ್ಷ್ಮಣ ಸವದಿ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post