ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ ಮಹಾಮಾರಿಗೆ ತುತ್ತಾಗಿ ಹೋಂ ಐಸೋಲೇಶನ್ ನಲ್ಲಿರುವ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ರೇಷನ್ ಕಿಟ್ ಗಳು ಹಾಗೂ ಅವಶ್ಯಕ ಔಷಧಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.
ಹೇರೋಹಳ್ಳಿಯ ತಮ್ಮ ಕಚೇರಿಯಲ್ಲಿ ಚಾಲನೆ ನೀಡಿದ ಸಚಿವರು, ಮೊದಲಿಗೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 72ರಲ್ಲಿ ವಾಸಿಸುವ ಕುಟುಂಬಗಳಿಗೆ ಉಚಿತ ರೇಷನ್ ಕಿಟ್ ಗಳು ಹಾಗೂ ಅವಶ್ಯಕ ಔಷಧಗಳ ವಿತರಣೆ ಮಾಡಿದರು. ಅಲ್ಲದೆ, ಸೋಂಕಿನ ಬಗ್ಗೆ ಯಾವುದೇ ಭಯ ಬೇಡ. ನಿಮ್ಮ ಪರವಾಗಿ ನಾನು ಸಹಿತ ಸರ್ಕಾರ ಇದೆ. ಅಲ್ಲದೆ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ರೋಗ ವಾಸಿಯಾಗಲಿದೆ. ಹಾಗಾಗಿ ಯಾರೂ ಆತಂಕಗೊಳ್ಳುವುದು ಬೇಡ ಎಂದು ಕಿವಿಮಾತು ಹೇಳಿದರು.
ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದೇನೆ; ಎಸ್ ಟಿ ಎಸ್
ಇದೊಂದು ಸಂದಿಗ್ದದ ಹಾಗೂ ಸಂಕಷ್ಟದ ಪರಿಸ್ಥಿತಿ. ತೀರಾ ಅಗತ್ಯದ ಪರಿಸ್ಥಿತಿ ಇದ್ದರಷ್ಟೇ ಮನೆಯಿಂದ ಹೊರಹೋಗಬೇಕು. ಆದರೆ, ಹೋಂ ಐಸೋಲೇಶನ್ ನಲ್ಲಿದ್ದವರ ಮನೆಗಳ ಪರಿಸ್ಥಿತಿ ತೀರಾ ಕಷ್ಟದಲ್ಲಿರುತ್ತದೆ. ಕೋವಿಡ್ ಸೋಂಕಿತರು ಸೇರಿದಂತೆ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಕುಟುಂಬದವರು ಹೊರಗೆ ಬರಲಾಗುವುದಿಲ್ಲ. ಹೊರಗೆ ಬರದೇ ಅಗತ್ಯ ವಸ್ತುಗಳನ್ನು ತಂದುಕೊಳ್ಳಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ನೆರವಾಗಬೇಕು ಎಂದೆನಿಸಿ, ಈಗ 5 ಸಾವಿರ ಕುಟುಂಬಗಳಿಗೆ ಉಚಿತ ಪಡಿತರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
5 ಸಾವಿರ ಕುಟುಂಬಗಳಿಗೆ ಸಹಾಯ:
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 17 ಗ್ರಾಮ ಪಂಚಾಯಿತಿ ಹಾಗೂ 5 ಬಿಬಿಎಂಪಿ ವಾರ್ಡ್ ಗಳ ವ್ಯಾಪ್ತಿಯಲ್ಲಿ ಕೋವಿಡ್_19 ಪಾಸಿಟಿವ್ ಸೋಂಕಿನಿಂದ ಬಳಲುತ್ತಿರುವ ಸುಮಾರು 5,000 ಕುಟುಂಬಗಳಿದ್ದು, ಎಲ್ಲರಿಗೂ ವೈಯಕ್ತಿಕವಾಗಿ ರೇಷನ್ ಕಿಟ್ ಹಾಗೂ ಅಗತ್ಯವಿರುವ ಔಷಧಿಗಳನ್ನು ವಿತರಿಸಲಾಗುತ್ತಿದೆ. ಕ್ಷೇತ್ರದ ಜನತೆಗೆ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ನೂತನ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ
ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಿದ್ಧಗೊಂಡಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು, ಅಲ್ಲಿನ ಮೂಲ ಸೌಕರ್ಯಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಜೊತೆಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ಇದೇ ವೇಳೆ, ಜನಸೇವಾ ವಿದ್ಯಾಕೇಂದ್ರದ ಕೋವಿಡ್ ಸುರಕ್ಷಾ ಸೇವಾ ಕೇಂದ್ರಕ್ಕೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಕಾಟನ್, ಸ್ಯಾನಿಟೈಸರ್, ಮಾತ್ರೆಗಳು, ಔಷಧಗಳು ಸೇರಿದಂತೆ ಆಸ್ಪತ್ರೆಗೆ ಬೇಕಿರುವ ಮೂಲಭೂತ ಅವಶ್ಯಕತೆಗಳ ಬಗ್ಗೆ ಕೇಂದ್ರದ ಗೌರವ ಕಾರ್ಯದರ್ಶಿಗಳಾದ ಎ.ಎಸ್. ನಿರ್ಮಲಕುಮಾರ್ ಜಿ ಅವರು ಸಚಿವರಿಗೆ ಸಲ್ಲಿಸಿದರು.
ಬಳಿಕ ಕನಕಪುರ ಮುಖ್ಯರಸ್ತೆ ಸಮೀಪ ಇರುವ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರಾದ ಸೋಮಶೇಖರ್ ಅವರು, ಸಿದ್ಧತಾ ಹಂತದಲ್ಲಿರುವ ಆಕ್ಸಿಜನ್ ಬೆಡ್ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ಪರಿಶೀಲನೆ ನಡೆಸಿದರು. ಕೆಆರ್ ಡಿಸಿಎಲ್ ಅವರು ನೀಡುತ್ತಿರುವ ಅನುದಾನದಲ್ಲಿ 100 ಹಾಸಿಗೆಗಳ ಆಕ್ಸಿಜನ್ ಬೆಡ್ ವುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆಯಲಾಗುತ್ತಿದ್ದು,ಛೇರ್ಮನ್ ರುದ್ರೇಶ್ ಅವರ ಜೊತೆಗೂಡಿ ಸಚಿವರು ಚರ್ಚೆ ನಡೆಸಿದರು.
ಬಳಿಕ ಅಲ್ಲಿನ ಮುಖ್ಯಸ್ಥರೊಂದಿಗೆ ಹಾಗೂ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತ್ವರಿತವಾಗಿ ಆಕ್ಸಿಜನ್ ಬೆಡ್ ಸೌಲಭ್ಯವುಳ್ಳ ಈ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಬೇಕು. ಆ ಮೂಲಕ ಆದಷ್ಟು ಶೀಘ್ರದಲ್ಲಿ ಜನರಿಗೆ ಉಪಯುಕ್ತವಾಗಬೇಕು ಎಂದು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post