ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವ ವಿಷಯದಲ್ಲಿ ತಾವು ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಬೇಕು ಎನ್ನುವ ನಿಲುವು ನಮ್ಮದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ನಡೆದಿದೆ ಎನ್ನಲಾದ ಮಾತಿನ ಚಕಮಕಿ ಸತ್ಯಕ್ಕೆ ದೂರವಾದ ಅಂಶವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ವಿರೋಧ ವ್ಯಕ್ತಪಡಿಸುವುದು ನಮ್ಮ ನಿಲುವಲ್ಲ. ಮೊದಲಿನಿಂದಲೂ ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರಕಬೇಕು ಎನ್ನುವ ಅಭಿಲಾಷೆಯ ಹಾಗೂ ಪ್ರತಿಪಾದನೆಯನ್ನು ಮಾಡಿಕೊಂಡು ಬಂದಿದ್ದೇವೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಸಮುದಾಯದಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಹೋರಾಟಕ್ಕೆ ಈಗಾಗಲೇ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾನೂನಾತ್ಮಕವಾಗಿ ನಡೆಯಬೇಕಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ಬೇಕಾದ ಬೆಂಬಲವನ್ನು ನಾವು ನೀಡಲು ಸಿದ್ದರಿದ್ದೇವೆ ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post