ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮದುವೆ ಮೊದಲಾದ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ ಗಡಿ ಭಾಗಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚತಾರಾ ಹೋಟೆಲ್, ಕಲ್ಯಾಣ ಮಂಟಪ ಮೊದಲಾದವುಗಳಿಗೆ ಕೊರೊನಾ ಹರಡದಂತೆ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ತಡರಾತ್ರಿ ಪಾರ್ಟಿಗಳು, ಹೆಚ್ಚು ಜನರ ಸೇರುವುದನ್ನು ತಡೆಗಟ್ಟಲು ಮಾರ್ಗಸೂಚಿ ನೀಡಲಾಗಿದೆ. ಪಕ್ಕದ ರಾಜ್ಯ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ ಎಂದರು.
ಕೋವಿಡ್ ಬೆಳವಣಿಗೆಗಳನ್ನು ಗಮನಿಸಲಾಗುತ್ತಿದೆ. ಇದೇ ಸಮಯದಲ್ಲಿ 3,500 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ತೇಜೋವಧೆ ಮಾಡುವಂಥ ಅಪ್ರಮಾಣೀಕೃತ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ನಿರ್ಬಂಧ ಹೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಮಾಧ್ಯಮಗಳು ಪ್ರಜಾಪ್ರಭುತ್ವದ ಸ್ಥಂಭವಾಗಿದೆ. ವೀಡಿಯೋ ಪ್ರಸಾರದ ವಿಚಾರದಲ್ಲಿ ಮಾಧ್ಯಮಗಳು ಪರಿಶೀಲಿಸಬೇಕಿತ್ತು. ಮಾಧ್ಯಮಗಳು ವೀಡಿಯೋ ಪಡೆದಾಗ ಅದನ್ನು ಪರಿಶೀಲಿಸಬೇಕು. ಸತ್ಯ ಪರಿಶೀಲಿಸದೆ ಯಾವುದನ್ನೂ ಪ್ರಸಾರ ಮಾಡಬಾರದು. ವೀಡಿಯೋ ಹಿಂದೆ ರಾಜಕೀಯ ಸೇರಿದಂತೆ ಬೇರೆ ಬೇರೆ ಕಾರಣಗಳಿವೆ ಎಂದರು.
ಸರ್ವಿಕಲ್ ಕ್ಯಾನ್ಸರ್‌ನ ಪರೀಕ್ಷೆ ಹಾಗೂ ಚಿಕಿತ್ಸೆಯ ಮಾಹಿತಿ ಅಭಿಯಾನಕ್ಕೆ ಚಾಲನೆ:
ಸರ್ವಿಕಲ್ ಕ್ಯಾನ್ಸರಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ನೀಡಿ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಹಾಗೂ ಆರೋಗ್ಯ ಶಿಕ್ಷಣ ಇಲಾಖೆಯು ಹಿಮೋಜೆನೋಮಿಕ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ವಿಧಾನಸೌಧದದಲ್ಲಿ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮೂಲ ಉದ್ದೇಶ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಡಗಟ್ಟುವಿಕೆ ಹೇಗೆ ಸಾಧಿಸಬಹುದು ಮತ್ತು ಪ್ರತ್ಯೇಕವಾಗಿ ಮಹಿಳೆಯರಲ್ಲಿ ಉಂಟಾಗುವ ಎಲ್ಲಾ ಕ್ಯಾನ್ಸರುಗಳ ಪೈಕಿ, ಈ ಸರ್ವಿಕಲ್ ಕ್ಯಾನ್ಸರ್ ಮಾತ್ರ ಸರಿಯಾದ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಿದಲ್ಲಿ ತಡೆಗಟ್ಟಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವುದು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ವಿಧಾನ ಸೌಧದ ಎಲ್ಲ ಮಹಿಳಾ ನೌಕರ ಸಹೋದ್ಯೋಗಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ವಿಕಲ್ ಕ್ಯಾಸರಿನ ಸುಧೀರ್ಗ ಮಾಹಿತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post