ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಕೊರೋನದಿಂದಾಗಿ ರಾಜ್ಯ ಸೂತಕದ ಮನೆಯಾಗಿದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮುಲಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ.
ಇದು ಜಿಲ್ಲಾಧಿಕಾರಿಗಳ ಸಭೆ ಅಥವಾ ಪ್ರಗತಿ ಪರಿಶೀಲನೆ ಸಭೆ ಅಲ್ಲ. ಮಾಹಿತಿ ಸಂಗ್ರಹಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಎಂದರೆ ಅದು ಸಾಂವಿಧಾನಿಕ ಹುದ್ದೆ. ಹೀಗಾಗಿ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿರುವುದರಿಂದ ಹಕ್ಕುಚ್ಯುತಿ ಆಗಿದೆ. ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.
2009ರಲ್ಲಿಯೂ ಸರ್ಕಾರ ಇದೇ ನಿಲುವು ಅನುಸರಿಸಿತ್ತು. ಸರ್ಕಾರದ ಹುಳುಕು ಹೊರ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.
ಕೊರೋನ ನಿಯಂತ್ರಣ ಮತ್ತು ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರಯಪಯುಕ್ತ ಎಂಬುದು ಸಾಬೀತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜನತೆ ಸರ್ಕಾರಕ್ಕೆ ಹಾಗೂ ಸಿಎಂ ಅವರಿಗೆ ಶಾಪ ಹಾಕುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಕೊರೋನ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ಈ ವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಅದಕ್ಕೂ ಉತ್ತರ ಬಂದಿಲ್ಲ. ಉತ್ತರಿಸುವ ಸೌಜನ್ಯವೂ ಮುಖ್ಯಮಂತ್ರಿಯವರಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಗೆ ದ್ರೋಹವೆಸಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಪ್ರತಿಪಕ್ಷಗಳ ಯಾವುದೇ ಪತ್ರಕ್ಕೂ ಉತ್ತರ ನೀಡುವುದಿಲ್ಲ. ಅದೇ ನಿಲುವನ್ನೂ ಯಡಿಯೂರಪ್ಪ ಅವರೂ ಅನುಸರಿಸುತ್ತಿದ್ದಾರೆ. ಯಥಾ ರಾಜ ತಥಾ ಪ್ರಜೆ ಎನ್ನುವಂತೆ ಆಗಿದೆ. ಈ ಸರ್ಕಾರದ ವೈಫಲ್ಯದಿಂದ ಸಾವಿರಾರು ಜನ ಸಾಯುತ್ತಿದ್ದಾರೆ. ಸತ್ಯ ಹೇಳಿದರೆ ಕೇಸು ದಾಖಲಿಸುವ, ಬಂಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರಬಾರದು.
ಪ್ರವಾಹ ಪರಿಹಾರ/ತಾರತಮ್ಯ:
ಪ್ರವಾಹ ಪರಿಹಾರದ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಧೊರಣೆ ಅನುಸರಿಸುತ್ತಿದೆ. ಗುಜರಾತ್ ಗೆ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿರುವ ಪ್ರಧಾನಿಯವರು ಚಂಡಮಾರುತದಿಂದ ತತ್ತರಿಸಿರುವ ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ. ಚಂಡಮಾರುತದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಆದರೂ ಪರಿಹಾರ ಕೊಟ್ಟಿಲ್ಲ.
ಲಸಿಕೆ ವಿರೋಧ ಮಾಡಿರಲಿಲ್ಲ:
ಕೋವಿಡ್ ಲಸಿಕೆ ನೀಡುವುದಕ್ಕೆ ನಾವು ವಿರೋಧ ಮಾಡಿರಲಿಲ್ಲ. ಎಲ್ಲರಿಗೂ ಲಸಿಕೆ ಸಿಗಬೇಕು. ಅದಕ್ಕಾಗಿ ಅಭಿಯಾನ ನಡೆಸಬೇಕು ಎಂದು ಈಗಲೂ ಒತ್ತಾಯ ಮಾಡುತ್ತೇವೆ. ಲಸಿಕೆಯೇ ಇಲ್ಲದೆ ಆಂದೋಲನಕ್ಕೆ ಚಾಲನೆ ನೀಡಿದವರು ಯಾರು ? ಎಂದು ಪ್ರಶ್ನಿಸಿದರು.
ಜನಪರ. ಶ್ರೇಷ್ಠ ರಾಜಕಾರಣಿ ರಾಜೀವ್
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಈ ದೇಶ ಕಂಡ ಜನಪರ ಹಾಗೂ ಶ್ರೇಷ್ಠ ರಾಜಕಾರಣಿ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದರು.
ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಿಸಿದವರು ರಾಜೀವ್ ಗಾಂಧಿ. ಅವರಿಂದಾಗಿಯೇ ಇಂದು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯ ಸಿಕ್ಕಿದೆ ಎಂದು ಹೇಳಿದರು. ಮಹಿಳಾ ಮೀಸಲು ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಲೋಕಸಭೆಯಲ್ಲಿಯೂ ಅಂಗೀಕಾರಕ್ಕೆ ಬಿಜೆಪಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೂರವಾಣಿ ಮೂಲಕ ಇಂದು ಜಗತ್ತಿನ ಯಾವುದೇ ಮೂಲೆಯನ್ನು ಸಂಪರ್ಕಿಸಬಹುದು. ಇದಕ್ಕೆ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಕಾರಣ. ರಾಜೀವ್‍ಗಾಂಧಿಯವರ ಪ್ರಯತ್ನದ ಫಲವಾಗಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಮಹಾನ್ ಸಾಧನೆ ಮಾಡಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post