ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೃದ್ಧಾಶ್ರಮಗಳ ನಿರ್ವಹಣೆಗೆ ಕೇಂದ್ರ ಸರ್ಕಾರದ ಅನುದಾನವನ್ನು 25 ಲಕ್ಷ ರೂ.ಗಳಿಗೆ ನಿಗದಿಪಡಿಸಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ 8 ಲಕ್ಷ ರೂ.ಗಳ ಅನುದಾನವನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.
ಅವರು ಇಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ಬಹಳ ಸಂವೇದನಾಶೀಲವಾಗಿ ಹಿರಿಯರಿಗೆ ಸ್ಪಂದಿಸುತ್ತದೆ. ಅವರ ವೈಯಕ್ತಿಕ ಬದುಕಿಗೆ ಆತ್ಮಸ್ಥೈರ್ಯ, ಲವಲವಿಕೆ, ಜೀವಂತಿಕೆಯನ್ನು ತುಂಬುವ ಕೆಲಸ ಮಾಡಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಸರ್ಕಾರ ನಿಮಗೆ ಆಶ್ರಯಗೋಲಾಗುತ್ತದೆ. ಆಧಾರವಾಗುತ್ತದೆ ಎಂಬ ಭರವಸೆಯನ್ನಿತ್ತರು.
ಹಿರಿತನ ಒಂದು ಸ್ಥಿತಿ. ವಯಸ್ಸು, ಅನುಭವ ಹಾಗೂ ನಮ್ಮ ನಡವಳಿಕೆಯಿಂದ ಹಿರಿತನ ತೀರ್ಮಾನವಾಗುತ್ತದೆ. ಮಾನಸಿಕವಾಗಿ ನಾವು ಗಟ್ಟಿ ಇದ್ದು, ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬ ಮನಸ್ಥಿತಿ ಇದ್ದರೆ, ಹಿರಿತನವನ್ನು ಅರ್ಥಪೂರ್ಣವಾಗಿ ಕಳೆಯಬಹುದು. ಈ ಮನೋಸ್ಥಿತಿ ಪಡೆಯಲು ದೈಹಿಕ ಆರೋಗ್ಯ, ಕುಟುಂಬದ ವಾತಾವರಣ, ಸಮಾಜದ ಸಹಾಯ ಅಗತ್ಯ. ಹಿರಿಯರು ಸಂತೋಷವಾಗಿ, ಸುರಕ್ಷಿತವಾಗಿ ಹಾಗೂ ಆರೋಗ್ಯವಂತರಾಗಿ ಬದುಕಲು ಸಾಧ್ಯ. ಸರ್ಕಾರ, ವ್ಯವಸ್ಥೆ, ಕುಟುಂಬ ಮತ್ತು ಸಮಾಜ ಎಂಬ ನಾಲ್ಕು ಕಂಬಗಳು ಹಿರಿಯ ಜೀವಿಗಳಿಗೆ ಆಶ್ರಯ ಕೊಡುತ್ತವೆ. ಈ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸ್ಥಿತಪ್ರಜ್ಞತೆಯಿಂದ ಬದುಕನ್ನು ಎದುರಿಸಿ:
ಹಿರಿಯರ ಬದುಕಿನಲ್ಲಿ ಹಾಸ್ಯ ಟಾನಿಕ್ ಇದ್ದಂತೆ. ನಮ್ಮ ಬದುಕಿನಲ್ಲಿ ಎಲ್ಲವನ್ನೂ ನಿಯಂತ್ರಣ ಮಾಡುತ್ತೇವೆ ಎನ್ನುವುದು ತಪ್ಪು. ಅತ್ಯಂತ ಸ್ಥಿತಪ್ರಜ್ಞರಾಗಿ ಬದುಕನ್ನು ಎದುರಿಸಬೇಕಾಗುತ್ತದೆ ಎಂದ ಮುಖ್ಯಮಂತ್ರಿಗಳು, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಅಗತ್ಯ. ಮಾಡಿದ್ದನ್ನು ಸರಿಯಾಗಿ ಮಾಡಿದ್ದೇನೆ ಸಂತೃಪ್ತಿಯ ಭಾವ ಇರಬೇಕು. ಆತ್ಮಚೈತನ್ಯವನ್ನು ಸದಾಕಾಲ ಜೀವಂತವಾಗಿಡಬೇಕು. ಕರ್ನಾಟಕದಲ್ಲಿನ 54 ಲಕ್ಷ ಹಿರಿಯರು ಸಂತೋಷದಿಂದಿರಬೇಕು ಎನ್ನುವುದು ನನ್ನ ಆಶಯ ಎಂದರು.
ಹಿರಿಯರು ಅನುಭವದ ಭಂಡಾರ:
ಹಿರಿಯರು ಅನುಭವದ ಭಂಡಾರ, ಸಂಪತ್ತು ಇದ್ದಂತೆ. ಈ ಸಂಪತ್ತು ನಾಡು ಕಟ್ಟುವುದರಲ್ಲಿ, ಸಮಾಜ ಕಟ್ಟಲು, ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಲು ಹಿರಿಯರ ಅನುಭವ ಬಳಕೆಯಾಗಬೇಕು. ಯಾವ ಸಮಾಜದಲ್ಲಿ ಯುವಕರು ಹಿರಿಯರನ್ನು ಗೌರವಿಸಿ ಆಧಾರವಾಗುತ್ತಾರೋ, ಆಶ್ರಯಗೋಲಾಗುತ್ತಾರೋ ಆ ಸಮಾಜ ಅತ್ಯಂತ ಧನ್ಯತಾಪೂರ್ಣ ಸಮಾಜವಾಗುತ್ತದೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಮನೆಯಲ್ಲಿ ಹಿರಿಯರನ್ನು ಇಟ್ಟುಕೊಂಡು ಗೌರವಿಸುವುದು ಭಾರತೀಯರ ಸಂಸ್ಕೃತಿ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್, ಕೇಂದ್ರ ಸಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಉದಯ್ ಗರುಡಾಚಾರ್, ಪೂರ್ಣಿಮಾ ಶ್ರೀನಿವಾಸ್ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post