ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಶೋಧಕ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪರವರ ನೂತನ ಕೃತಿ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಸಂಶೋಧನ ಗ್ರಂಥ ಜ.13ರಂದು ಲೋಕಾರ್ಪಣೆಗೊಳ್ಳಲಿದೆ.
ನಗರದ ಕೆಆರ್ ರಸ್ತೆಯ ಬೆಂಗಳೂರು ಗಾಯನ ಸಮಾಜ ಸಭಾಂಗಣದಲ್ಲಿ ಪ್ರೊ.ಮಲ್ಲೇಪುರಂ 70 ಅಭಿನಂದನಾ ಸಮಿತಿ ಮತ್ತು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರವರು ಗ್ರಂಥ ಲೋಕಾರ್ಪಣೆ ಮಾಡವರು.
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನ್ಯಾ. ಎನ್. ಕುಮಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ, ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ರಾಷ್ಟ್ರೀಯ ಸೀಮಾ ಶುಲ್ಕ, ಪರೋಕ್ಷ ತೆರಿಗೆ, ಹೆಚ್ಚುವರಿ ಮಹಾನಿರ್ದೇಶಕರು ನಾರಾಯಣಸ್ವಾಮಿ ,ಶ್ರೀ ಮಾರ್ಕಂಡೇಯ ಮಹರ್ಷಿ ಪದ್ಮಶಾಲಿ ಗುರುಪೀಠ ಮಹಾಸಂಸ್ಥಾನ ಅಧ್ಯಕ್ಷ ಕೆ.ಸಿ. ಕೊಂಡಯ್ಯ ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮುಂತಾದ ನಾಡಿನ ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರದ ಗಣ್ಯಮಾನ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕೃತಿ ಕುರಿತು:
ಪ್ರತಿಯೊಂದು ದೇವಾಲಯವೂ ಆಯಾ ಪ್ರದೇಶದ ಇತಿಹಾಸವನ್ನು ಸಾರುತ್ತದೆ. ಈ ದೇವಾಲಯಗಳ ಸೂಕ್ಷ್ಮ ಅವಲೋಕನದಿಂದ ಆಯಾ ಕಾಲಘಟ್ಟಗಳ ಶಿಕ್ಷಣ, ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆ, ಜೀವನ ಕ್ರಮ, ಕಲೆ, ಸಾಹಿತ್ಯ ಮುಂತಾದ ಅನೇಕ ವಿಷಯ ತಿಳಿಯಬಹುದು. ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸಲು ಈ ರೀತಿಯ ಜ್ಞಾನ ಮತ್ತು ಇತಿಹಾಸ ಪ್ರಜ್ಞೆ ಅತ್ಯವಶ್ಯ. ಈ ನಿಟ್ಟಿನಲ್ಲಿ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಬರೆದಿರುವ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಬಹು ಉಪಯುಕ್ತವಾಗಿದೆ.
ಅಪರಿಮಿತ ಅಧ್ಯಯನದ ಸಾರಸ್ವತ ಸಾಹಸದಲ್ಲಿ ಕೆ.ಗು.ಲ.ರವರು ಸಫಲರಾಗಿದ್ದಾರೆ ಅದರ ಪ್ರತೀಕವೇ ಈ ಸತ್ಕೃತಿ! ಬಹುತೇಕ ಅಪರಿಚಿತ ದೇವಾಲಯಗಳ ಇತಿಹಾಸ, ಶಾಸನ ವಿವರಗಳು, ಶಿಲ್ಪಕಲೆಯ ವಿಶೇಷತೆ, ಐತಿಹ್ಯ ಮುಂತಾದ ಹಲವು ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಲವಲವಿಕೆಯ ಸರಳವಾದ ಭಾಷೆ, ಸುಂದರ ನಿರೂಪಣೆಯೊಂದಿಗೆ ಗಮನ ಸೆಳೆಯುತ್ತದೆ. ರಾಜ್ಯ ಸರಕಾರವು ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಚಿಂತಿಸುತ್ತಿರುವ ಕಾಲದಲ್ಲಿ ಆಸಕ್ತರಿಗೆ ಇದು ಉತ್ತಮ ಕೈಪಿಡಿಯಂತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post