ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿನ ನಮ್ಮ ಕ್ಲಿನಿಕ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಉದ್ಘಾಟಿಸಿರುವುದು ಬಹಳ ಸಂತಸ ತಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ. ಬೆಂಗಳೂರು ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣವನ್ನು ನೀಡಿರುವುದು ನಮ್ಮ ಬಿಜೆಪಿ ಸರ್ಕಾರ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಾಲಕ್ಷ್ಮೀಪುರ 52ನೇ ವಾರ್ಡ ನ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್, ವೃಷಭಾವತಿ ನಗರದ ವಾರ್ಡ್ ನಂ.102 ರ ಎನ್.ಜಿ.ಓ ಎಸ್ ಕಾಲೋನಿಯಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಶಕ್ತಿಗಣಪತಿ ನಗರದ 74 ನೇ ವಾರ್ಡ್ ನ ಶಂಕರನಾಗ್ ಬಸ್ ನಿಲ್ದಾಣ ಹತ್ತಿರದ ಬಿಬಿಎಂಪಿ ಪ್ರೌಢಶಾಲೆ, ಕಾಲೇಜು ಕಟ್ಟಡ ಹಾಗೂ ಮಹಾಲಕ್ಷ್ಮೀಪುರಂ ಬಿಬಿಎಂಪಿ ರೆಫರಲ್ ಆಸ್ಪತ್ರೆ, ಮಹಾಲಕ್ಷ್ಮೀ ಲೇಔಟ್ ನ ರಾಣಿ ಅಬ್ಬಕ್ಕ ಆಟದ ಮೈದಾನ ಹಾಗೂ ಇನ್ನಿತರ ನೂತನ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉದ್ಘಾಟಿಸಲಾಗಿದೆ ಎಂದರು.
ಕಳೆದ ಮೂರು ವರ್ಷಗಳಿಂದ ನೂರಕ್ಕೆ ನೂರರಷ್ಟು ಉತ್ತಮ ಕೆಲಸಗಳು ನಮ್ಮ ಸರ್ಕಾರದಿಂದ ಆಗಿದೆ. ಸರಿಸುಮಾರು 15 ಉದ್ಯಾನಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಮಾಡಲಾಗಿದೆ.ಖಾಸಗಿ ಶಾಲೆಗಳಿಗಿಂತಲೂ ಅತ್ಯುತ್ತಮವಾದ ಸರ್ಕಾರಿ ಶಾಲೆಗಳು ನಮ್ಮಲ್ಲಿದೆ ಎಂದು ಹೇಳಿದರು.
ಕ್ಷೇತ್ರದ ಜನತೆಯ ಅನಿಸಿಕೆಯಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾನ್ಯ ಮುಖ್ಯಮಂತ್ರಿಗಳು ನಮ್ಮ ಕ್ಷೇತ್ರಕ್ಕೆ ಮಾಡಿಕೊಟ್ಟಿದ್ದಾರೆ. ತಮ್ಮೆಲ್ಲರ ಪರವಾಗಿ ಹಾಗೂ ಕ್ಷೇತ್ರದ ಪರವಾಗಿ ಸ್ಥಳೀಯ ಶಾಸಕನಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪ್ರತಿ ವಾರ್ಡಿನಲ್ಲಿರುವಂತಹ ನಮ್ಮ ಕ್ಲಿನಿಕ್ ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳು, ಉಚಿತವಾಗಿ ಮಾಡಲಾಗುತ್ತದೆ ಇದನ್ನು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ನಮ್ಮ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಡಾ.ಕೆ ಸುಧಾಕರ್, ಮಾಜಿ ಶಾಸಕರಾದ ನೆಲ ನರೇಂದ್ರಬಾಬು, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಆಡಳಿತಗಾರರಾದ ರಾಕೇಶ್ ಸಿಂಗ್, ಡಾ. ತ್ರಿಲೋಕ್ ಚಂದ್ರ, ಡಾ.ನವೀನ್ ಭಟ್, ಆರ್ ದೇವೇಗೌಡ, ಲಕ್ಷ್ಮೀನಾರಾಯಣ್, ಹೇಮಲತಾ, ಎಸ್. ಹರೀಶ್, ಜೈರಾಮ್, ರಾಘವೇಂದ್ರ ಶೆಟ್ಟಿ, ಅನಿಲ್ ಕುಮಾರ್, ಡಾ.ದೀಪಕ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post