ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಕಾರ್ಯ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದ ಆರ್ಥಿಕ ಪ್ರಗತಿಗೆ ಹಾಗೂ ಸಾಂಸ್ಕೃತಿಕವಾಗಿಯೂ ಪ್ರವಾಸೋದ್ಯಮ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಈ ಆಯವ್ಯಯದಲ್ಲಿ ಘೋಷಿಸಿರುವ ಸ್ಮಾರಕಗಳನ್ನು ದತ್ತು ಪಡೆಯುವ ಯೋಜನೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸ್ಮಾರಕಗಳ ವಿವರ ಹಾಗೂ ತಗಲುವ ವೆಚ್ಚದ ಪಟ್ಟಿ ಸಿದ್ಧಪಡಿಸಿಕೊಂಡು, ವೆಬ್ಸೈಟ್ ರೂಪಿಸುವಂತೆ ತಿಳಿಸಿದರು. ಜೊತೆಗೆ ಈ ಕುರಿತು ಕಾರ್ಪೊರೇಟ್ ಕಂಪೆನಿಗಳಿಗೆ ಖುದ್ದಾಗಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಜೊತೆಗೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರೊಂದಿಗೆ ಸಮನ್ವಯ ವಹಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದರು.

ಪರ್ವತಮಾಲಾ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ನಂದಿಬೆಟ್ಟ, ಯಾಣ, ಅಂಜನಾದ್ರಿ ಬೆಟ್ಟ, ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ರೋಪ್ವೇ ನಿರ್ಮಿಸುವ ಕುರಿತು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ, ತ್ವರಿತವಾಗಿ ಭೂಸ್ವಾಧೀನ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Also read: ಅನುಭವಾಧಾರಿತ ಶಿಕ್ಷಣದಿಂದ ಪರಿಣಾಮಕಾರಿ ಕಲಿಕೆ ಸಾಧ್ಯ: ಡಾ. ಚಿದಾನಂದ ಅಭಿಪ್ರಾಯ
ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಇದರೊಂದಿಗೆ ಸುರಪುರ ಕೋಟೆಯನ್ನೂ ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ 400 ಪ್ರವಾಸಿ ಮಾರ್ದರ್ಶಿಗಳಿಗೆ ಮಾಸಿಕ 2000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅವರಿಗೆ ಹಂಪಿ ವಿಶ್ವವಿದ್ಯಾಲಯದಲ್ಲಿ ಸಂವಹನ ಕೌಶಲ್ಯ ತರಬೇತಿ ನೀಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟನ್ನು ಉಪಯುಕ್ತ ಮಾಹಿತಿಯೊಂದಿಗೆ ಹಾಗೂ ಬಳಕೆದಾರ ಸ್ನೇಹಿಯಾಗಿ ಮರುವಿನ್ಯಾಸಗೊಳಿಸುವಂತೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸ್ವತ್ತುಗಳ ಆಡಿಟ್ ನಡೆಸಿ, ಆದಾಯೋತ್ಪನ್ನ ತರುವಂತೆ ಮಾಡಲು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದಲ್ಲಿ ಕಾಳಿ ನದಿ, ಆಲಮಟ್ಟಿ ಹಾಗೂ ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗಗಳನ್ನು ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ರಾಜ್ಯದ 10-12 ಕೆರೆಗಳ ಬಳಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಚಾರಣಕ್ಕೆ ಉತ್ತೇಜನ ಮೊದಲಾದ ಕ್ರಮ ಕೈಗೊಳ್ಳುವ ಮೂಲಕ ವಿದೇಶಿ ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಪ್ರವಾಸಿಗರನ್ನೂ ಆಕರ್ಷಿಸಬೇಕೆಂದು ತಿಳಿಸಿದರು. ರಾಜ್ಯದ ಹಿಡ್ಕಲ್, ಕಬಿನಿ, ಗೊರೂರು ಅಣೆಕಟ್ಟು ಪ್ರದೇಶದಲ್ಲಿ ಉದ್ಯಾನವನಗಳ ಅಭಿವೃದ್ಧಿ ಕೈಗೊಳ್ಳುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್.ಎನ್. ಪ್ರಸಾದ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post