ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದ್ದು, ಮೂರು ತಿಂಗಳು ಎಲ್ಲರೂ ದಣವರಿಯದೇ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಪಕ್ಷದ ಪ್ರಭಾರಿಗಳಿಗೆ ಹೇಳಿದ್ದಾರೆ.
ಇಂದು ನಗರದ ಖಾಸಗಿ ಹೋಟೇಲ್ ನಲ್ಲಿ ಬಿಜೆಪಿಯ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದಿನ ಮೂರುವರೆ ತಿಂಗಳು ಕರ್ನಾಟಕದ ಚುನಾವಣೆಗೆ ಪ್ರಮುಖ ಪಾತ್ರ ವಹಿಸುವವರೆಲ್ಲರೂ ಒಂದೆಡೆ ಸೇರಿದ್ದೇವೆ. ಒಂದು ವಿಧಾನಸಭಾ ಕ್ಷೇತ್ರ ಗೆಲ್ಲಲು ಯಾವ ರೀತಿ ರಣನೀತಿಯನ್ನು ರೂಪಿಸಬೇಕು ಎನ್ನುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ. ನರೇಂದ್ರ ಮೋದಿಯವರ ನಾಯಕತ್ವವಿರುವ ಕೇಂದ್ರ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಕಳೆದ 8 ವರ್ಷದಿಂದ ನೀಡುತ್ತ ಬಂದಿದೆ. ರಾಜ್ಯದಲ್ಲಿ 2019ರಲ್ಲಿ ಯಡಿಯೂರಪ್ಪನವರು ಸಿಎಂ ಆದ ಮೇಲೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಕೋವಿಡ್ ನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದ್ದೇವೆ. ನಾನು ಮುಖ್ಯಮಂತ್ರಿಯಾದ ಮೇಲೆ ಪ್ರವಾಹ ನಿರ್ವಹಣೆ ಮಾಡಿ. ಜನರಿಗೆ ಹಲವು ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಈ ಎಲ್ಲ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ ಮನದಟ್ಟು ಮಾಡುವ ಅವಶ್ಯಕತೆಯಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಐದು ವರ್ಷ ಅಧಿಕಾರ ನಡೆಸಿತು. ಆದರೆ ಆ ಸಮಯದಲ್ಲಿ ರಾಜ್ಯ ಎಲ್ಲ ರಂಗದಲ್ಲಿಯೂ ಹಿಂದುಳಿದಿತ್ತು. ಕೇಂದ್ರ ಸರ್ಕಾರ ಕೊಟ್ಟಿರುವ ಕಾರ್ಯಕ್ರಮಗಳಿಗೆ ತಮ್ಮ ಹೆಸರನ್ನು ಕೊಟ್ಟು ಜನರಿಗೆ ನಿರಂತರವಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಅನ್ನಭಾಗ್ಯ ಯೋಜನೆಗೆ 30 ರೂ. ಕೇಂದ್ರದಿಂದ ಪಡೆದುಕೊಂಡು, ಕೇವಲ 3 ರೂ ಕೊಟ್ಟು ಇಡೀ ಪಡಿತರ ವಿತರಣೆಯನ್ನು ನಾವೇ ಕೊಟ್ಟಿದ್ದೇವೆ ಎಂದು ಹೇಳಿಕೊಂಡರು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವ ಮುಂಚೆಯೇ 30 ಕೆ.ಜಿ ಅಕ್ಕಿಯನ್ನು ಒಂದು ಕುಟುಂಬಕ್ಕೆ ನಮ್ಮ ಸರ್ಕಾರದ ಸಮಯದಲ್ಲಿ ಕೆ.ಜಿ ಮೂರು ರೂ.ಗೆ ನೀಡುತ್ತಿದ್ದರು ಎಂದರು.

Also read: ಶ್ರೀ ಧ್ಯಾನಯೋಗಿ ಶಿವನಮೂರ್ತಿ ಹಾಗೂ ಮಾನಸಮೌನ ಪಿರಮಿಡ್ ಧ್ಯಾನ ಮಂದಿರ ಲೋಕಾರ್ಪಣೆ
ನಮ್ಮ ಮೇಲಿನ ಆರೋಪಕ್ಕೆ ಯಾವುದೇ ಒಂದು ಪುರಾವೆ ಕೊಟ್ಟರೆ, ನಿಸ್ಪಕ್ಷವಾಗಿ ನಾವು ತನಿಖೆ ಮಾಡಿಸುತ್ತೇವೆ. ಭ್ರಷ್ಟಾಚಾರ ತಡೆಯಲು ಟೆಂಡರ್ ಪರಿಶೀಲನಾ ಸಮಿತಿ ರಚನೆ ಮಾಡಿದ್ದೇವೆ. ಅಲ್ಲಿ ಅದರ ಪರಿಶೀಲನೆ ಆಗುತ್ತದೆ. ಪಾರದರ್ಶಕವಾಗಿ ನಾವು ವ್ಯವಸ್ಥೆಗಳನ್ನು ನಾವು ರೂಪಿಸಿದ್ದೇವೆ. ನೀರಾವರಿ ನಿಗಮದಲ್ಲಿ ನಾವು ರಚನೆ ಮಾಡಿದ್ದ ಸಮಿತಿಗಳನ್ನು ರದ್ದು ಮಾಡಿ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದೀರಿ ಎಂದು ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದರು.
ಇದುವರೆಗೂ ಯಾವ ಪ್ರಧಾನಿಯು ಮನೆ ಮನೆಗೆ ನೀರು ಕೊಡುವ ಧೈರ್ಯ ಮಾಡಿರಲಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಮನೆಗೂ ಜಲಜೀವನ್ ಮಿಷನ್ ಜಾರಿಗೆ ತಂದಿದ್ದಾರೆ. ಎಲ್ಲರ ಮನೆಗೆ ನೀರು ಕೊಡುವ ಕೆಲಸ ಮಾಡಿದ್ದೇವೆ. ಇದೊಂದು ದಾಖಲೆ, 75 ವರ್ಷದಲ್ಲಿ ಆಗದೇ ಇರುವುದನ್ನು 2 ವರ್ಷದಲ್ಲಿ ಮಾಡಿ ತೋರಿಸಿದ್ದೇವೆ. ಇದನ್ನು ಮತದಾರರ ಮನೆಗೆ ಹೊಗಿ ತಿಳಿಸುವ ಕೆಲಸ ಮಾಡಬೇಕು ಎಂದರು.
ನಮ್ಮ ರಾಜ್ಯ ಸರ್ಕಾರ ಯಡಿಯೂರಪ್ಪ ಸಿಎಂ ಆದಾಗ ರೈತರ ಪಂಪ್ ಸೆಟ್ ಗಳಿಗೆ 10 ಎಚ್ ಪಿ ವರೆಗೂ ಉಚಿತ ವಿದ್ಯುತ್ ನೀಡಿದ್ದಾರೆ. ಯಡಿಯೂರಪ್ಪನವರು ಎರಡನೆಯ ಬಾರಿಗೆ ಸಿಎಂ ಆದಾಗ ಕಿಸಾನ್ ಸಮ್ಮಾನ ಯೋಜನೆಗೆ ರಾಜ್ಯದಿಂದ 4000 ಕೊಡುವ ಕೆಲಸ ಮಾಡಿದರು. ನಾವು ಬಂದ ಮೇಲೆ ರೈತ ವಿದ್ಯಾನಿಧಿ ಯೋಜನೆ ಮಾಡಿದ್ದೇವೆ. ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಇದರ ಪ್ರಯೊಜನವಾಗಿದೆ. ಕೇವಲ ರೈತರ ಮಕ್ಕಳಿಗೆ ಮಾತ್ರವಲ್ಲ, ಕಾರ್ಮಿಕರು, ನೇಕಾರರ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಿಸಿದ್ದೇವೆ. ದುಡಿಯುವ ವರ್ಗಕ್ಕೆ ಬಲವನ್ನು ತುಂಬಲು ಕಾಯಕ ಯೋಗಿ ಯೋಜನೆ ಮಾಡಿ, ಅವರಿಗೆ 50 ಸಾವಿರ ರೂ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಸರ್ಕಾರದ ಈ ಎಲ್ಲ ಯೋಜನೆಗಳ ಬಗ್ಗೆ ಚರ್ಚೆ ಮಾಡಿದರೆ, ಸಾಕಷ್ಟು ಜನರು ಅಭಿಮಾನಿಗಳಾಗಿ, ಕಾರ್ಯಕರ್ತರಾಗಿ ಪರಿವರ್ತನೆ ಆಗುತ್ತಾರೆ ಎಂದರು.
ಪರಿಶಿಷ್ಟ ಜಾತಿ/ ಪಂಗಡದವರ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ಸ್ವತಂತ್ರ ಬಂದ ಮೇಲೆ ಎಸ್.ಸಿ, ಎಸ್.ಟಿಗೆ ಎಲ್ಲರೂ ಜಾತಿಗಳನ್ನು ಸೇರಿಸುವ ಕೆಲಸ ಮಾಡಿದ್ದರು. ಆದರೆ ಅವರ ಮೀಸಲಾತಿ ಹೆಚ್ಚಳವನ್ನು ಕರ್ನಾಟಕದ ನಮ್ಮ ಬಿಜೆಪಿ ಸರ್ಕಾರ ದಿಟ್ಟ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಲಂಬಾಣಿ ಸಮುದಾಯವದರಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಮೀನುಗಾರರು, ಕುರಿಗಾಹಿಗಳಿಗೆ ದೊಡ್ಡ ಪ್ರಮಾಣದ ಸಹಾಯವನ್ನು ಮಾಡುತ್ತಿದ್ದೇವೆ ಎಂದರು.

ಇದು ಚುನಾವಣೆಯ ಸಮಯ, ದಣಿವರಿಯದೆ ಕೆಲಸ ಮಾಡಬೇಕು. ಮಾರ್ಚ್ 1 ರಿಂದ ನಮ್ಮ ರಥಯಾತ್ರೆ ಆರಂಭವಾಗಲಿದೆ. ಅಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಿ ಮತ್ತೆ ಬಿಜೆಪಿ ಸರ್ಕಾರವನ್ನು ತರುವ ಕೆಲಸ ಮಾಡಬೇಕು. ಈ ಚುನಾವಣೆಯ ಸಾರಥಿಗಳು ನೀವು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post