ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಹಾರ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅಸುರಕ್ಷಿತ ಆಹಾರ ತಡೆಗಟ್ಟಲು ಆಹಾರ ಸುರಕ್ಷತಾ ಇಲಾಖೆಯಿಂದ ಎರಡು ದಿನಗಳ ಆಂದೋಲನದ ರೀತಿಯಲ್ಲಿ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ #Dinesh Gundurao ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, ಹಿಂದೆಂದು ಕಾಣದ ರೀತಿಯಲ್ಲಿ ಸತತವಾಗಿ ಆಹಾರ ಗುಣಮಟ್ಟ ಪರೀಕ್ಷಿಸುವ #Food quality testing ಕಾರ್ಯವನ್ನ ಆಹಾರ ಸುರಕ್ಷತಾ ಇಲಾಖೆ ಕಳೆದ ಒಂದು ವರ್ಷದಿಂದ ನಡೆಸಿಕೊಂಡು ಬರುತ್ತಿದೆ. ಉತ್ತಮ ಗುಣಮಟ್ಟದ ಆಹಾರ ಸೇವೆನೆ ಉತ್ತಮ ಆರೋಗ್ಯಕ್ಕೆ ನಾಂದಿ.. ಹೀಗಾಗಿ ಆಹಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

Also read: ಓದು ಜೀವನದ ದೃಷ್ಟಿಕೋನವನ್ನೇ ಬದಲಿಸುತ್ತದೆ: ಡಾ. ನಾಗರಾಜ್ ಅಭಿಪ್ರಾಯ
ಈ ರೀತಿಯ ತಪಾಸಣೆಗಳಿಂದ ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಬಗ್ಗೆ ಹೆಚ್ಚು ಜಾಗೃತಿ ಮೂಡಲಿದೆ. ಜನರನ್ನ ಎಚ್ಚರಿಸುವುದು ನಮ್ಮ ಮುಖ್ಯ ಉದ್ದೇಶ. ಜೊತೆಗೆ ಅಸುರಕ್ಷಿತ ಆಹಾರವನ್ನ ತಯಾರಿಸುತ್ತಿರುವ ಉದ್ದಿಮೆದಾರರ ಮೇಲೂ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದರು. ಅಲ್ಲದೇ ಸಾರ್ವಜನಿಕರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನ ತಾವೇ ಪರಿಕ್ಷಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹೊಟೆಲ್ ರೆಸ್ಟೊರೆಂಟ್, ಫುಡ್ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3400 ಟೆಸ್ಟಿಂಗ್ ಕಿಟ್ ಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಸಾವಿರ ಕಿಟ್ ಗಳು ಬಂದಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿವೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಹಣ್ಣು ಮತ್ತು ತರಕಾರಿಗಳ 385 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ವಿಶ್ಲೇಷಿಸಲಾದ 266 ಮಾದರಿಗಳಲ್ಲಿ 239 ಮಾದರಿಗಳು ಸುರಕ್ಷಿತ ಎಂದು ಮತ್ತು 27 ಮಾದರಿಗಳು ಕ್ರಿಮಿನಾಶಕಗಳ ಶೇಷಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮತ್ತು Fungus growth ಕಂಡುಬಂದಿರುವುದರಿಂದ ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಅಲ್ಲದೇ 211 ಪನ್ನೀರ್, 246 ಕೇಕ್, 67 ಕೋವಾದ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ವಿಶ್ಲೇಷಣಾ ವರದಿಗಳು ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಲಾಖೆಯಿಂದ ಏಪ್ರಿಲ್-2024 ರಿಂದ ಇದುವರೆಗೆ 8418 ಸರ್ವೆ ಆಹಾರ ಮಾದರಿಗಳನ್ನು ಮತ್ತು 2593 ಕಾನೂನಾತ್ಮಕ ಆಹಾರ ಮಾದರಿಗಳನ್ನು (ಜುಲೈ-24 ಒಳಗೊಂಡಂತೆ) ಹಾಗೂ ಜುಲೈ-2024ರ ಮಾಹೆಯಲ್ಲಿಯೇ 2753 ಸರ್ವೆ ಆಹಾರ ಮಾದರಿಗಳನ್ನು ಮತ್ತು 711 ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ.
ಇದುವರೆಗೆ ರಾಜ್ಯಾದ್ಯಂತ 106 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, 34 ಪ್ರಕರಣಗಳಲ್ಲಿ 1 ದಿನದ ಜೈಲು ಶಿಕ್ಷೆಯನ್ನು 05 ಪ್ರಕರಣಗಳಲ್ಲಿ 5, 10, 30, 45 ಮತ್ತು 60 ದಿನಗಳ ಜೈಲು ಶಿಕ್ಷೆಯನ್ನು (ತಲಾ 1 ಪ್ರಕರಣ), 04 ಪ್ರಕರಣಗಳಲ್ಲಿ 90 ದಿನದ ಜೈಲು ಶಿಕ್ಷೆಯನ್ನು ಮತ್ತು 02 ಪ್ರಕಣಗಳಲ್ಲಿ 6 ತಿಂಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಲಾಗಿರುತ್ತದೆ. ಇದಲ್ಲದೆ 18 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ದಂಡವನ್ನು ವಿಧಿಸಲಾಗಿದೆ.
ಇದೇ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ಆಹಾರ ಸುರಕ್ಷತಾಧಿಕಾರಿಗಳಿಗೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಪರವಾನಿಗೆ/ನೊಂದಣಿ ಅರ್ಜಿಗಳನ್ನು ಶೀಘ್ರುಗತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುವಂತೆ ಮತ್ತು ತಪಾಸಣೆಯ ವಿವರಗಳನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಲು ಟ್ಯಾಬ್‌ಗಳನ್ನು ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post