ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮಹಾಮಾರಿ ಕೊರೊನಾ ರೋಗವನ್ನು ನಿಯಂತ್ರಣಗೊಳಿಸಲು ಎರಡನೇ ಬಾರಿಗೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಬದಿ, ಹೋಟೆಲ್ , ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಚರ್ಮಗಾರಿಕೆಯಲ್ಲಿ ತೊಡಗಿಸಿಕೊಂಡು ಪಾದರಕ್ಷೆ ಮತ್ತಿತರ ಚರ್ಮ ವಸ್ತುಗಳ ದುರಸ್ತಿ, ಪಾಲಿಷ್ ಮಾಡುವ ಕಾಯಕದಲ್ಲಿ ತೊಡಗಿರುವ 50,000 ಚರ್ಮ ಕುಶಲಕರ್ಮಿಗಳೂ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾತ್ಕಾಲಿಕ ಪರಿಹಾರವಾಗಿ ಈ ಕುಟುಂಬಗಳಿಗೆ ತಲಾ ಎರಡು ಸಾವಿರ ರೂ ಆರ್ಥಿಕ ನೆರವು ನೀಡಲು 10 ಕೋಟಿ ರೂ ಬಿಡುಗಡೆ ಮಾಡಿದ್ದು, ಪರಿಹಾರಧನ ನೀಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಸಮಾಜ ಕಲ್ಯಾಣಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವಂತೆ ತಾವು ಸಲ್ಲಿಸಿದ ಪ್ರಸ್ತಾವನೆಯನ್ನು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ, ಅನುಮೋದನೆ ನೀಡಿ ನೆರವಾಗಲು ಅನುದಾನವನ್ನೂ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ಶ್ರೀರಾಮುಲು ಅವರು ತಿಳಿಸಿದ್ದಾರೆ.
ಈ ಪರಿಹಾರ ಹಣವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿ, ಡಿಬಿಟಿ ಮುಖಾಂತರ ಪಾರದರ್ಶಕವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು. ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ (ಲಿಡ್ಕರ್ ) ಅಗತ್ಯ ಕ್ರಮವಹಿಸಲಾಗುತ್ತಿದ್ದು, ಫಲಾನುಭವಿಗಳು ದಿನಾಂಕ 3-6-2021 ರಿಂದ 15.6.2021 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ಪರಿಹಾರ ಧನವನ್ನು ಪಡೆಯಲು ಅರ್ಜಿಗಳನ್ನು ತಮ್ಮ ಮೊಬೈಲ್ ನಿಂದ/ ಬೆಂಗಳೂರು ಒನ್/ ಕರ್ನಾಟಕ ಒನ್ /ಗ್ರಾಮ ಒನ್/ಸಿಟಿಜನ್ ಸರ್ವೀಸ್ ಸೆಂಟರ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ.
ಲಿಡ್ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕರು ಸಂಪೂರ್ಣ ಮಾಹಿತಿಯೊಂದಿಗೆ ಹೆಲ್ಪ್ ಡೆಸ್ಕ್ ನಂತೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಫಲಾನುಭವಿಗಳಿಗೆ ಯೋಜನೆಯ ವಿವರ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ವಿಳಂಬ ಮಾಡದೇ ಈ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಪರಿಹಾರಧನವನ್ನು ಅವರ ಖಾತೆಗಳಿಗೆ ಜಮೆ ಮಾಡುವಂತೆ ಲಿಡ್ಕರ್ ಸಂಸ್ಥೆಗೆ ಸೂಚಿಸಲಾಗಿದೆ.
ಈ ಪರಿಹಾರ ಧನವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡಲು ಮನವಿ ಮಾಡಿದ ಸಚಿವರು, ಇನ್ನು ಮುಂದೆಯೂ ತಮ್ಮ ಉದ್ಯೋಗ ಮುಂದುವರೆಸಲು ಮತ್ತು ಆರ್ಥಿಕವಾಗಿ ಸಧೃಡರಾಗಲು ಅವಶ್ಯಕವಿರುವ ಯೋಜನೆಗಳನ್ನು /ಕಾರ್ಯಕ್ರಮಗಳನ್ನು ಸರ್ಕಾರವು ನೀಡಲಿದೆ. ತಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಸದಾ ನಿಮ್ಮೊಂದಿಗೆ ನಮ್ಮ ಸರ್ಕಾರ ಇರಲಿದೆ. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಈ ಸಮುದಾಯಕ್ಕೆ ಅಭಯ ನೀಡಿದ ಶ್ರೀ ಬಿ. ಶ್ರೀರಾಮುಲು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವೈಯಕ್ತಿಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ನಿಟ್ಟನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ವೈಯಕ್ತಿಕ ಸ್ಪಚ್ಚತೆ ಕಾಪಾಡಿಕೊಂಡು ಕೊರೊನಾ ನಿಯಂತ್ರಣಕ್ಕೆ ನೆರವಾಗುವಂತೆ ಸಚಿವರು ಮನವಿ ಮಾಡಿದ್ದಾರೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post