ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿಶ್ವವಿಖ್ಯಾತ ನಂದಿ ಬೆಟ್ಟ ಹತ್ತಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೋಪ್‌ವೇ ನಿರ್ಮಾಣ ಮಾಡಲು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು.
ಐಡೇಕ್ ಸಂಸ್ಥೆಯು ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿತು. 2.90 ಕಿ.ಮೀ ಎತ್ತರವಿರುವ ನಂದಿ ಗಿರಿಧಾಮಕ್ಕೆ ರೋಪ್‌ವೇ ನಿರ್ಮಿಸಲಾಗುವುದು. ನಂದಿ ಬೆಟ್ಟದ ಕೆಳಗಡೆ ಅಂದಾಜು 25 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ಫುಡ್‌ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು, ವೈನ್ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿಗರಿಗೆ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು.
ಭಾರತೀಯ ತಂತ್ರಜ್ಞಾನವನ್ನು ಬಳಸಿ ರೋಪ್‌ವೇ ನಿರ್ಮಾಣ ಮಾಡಿದರೆ ಅಂದಾಜು 80ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಯೂರೋಪಿಯನ್ ತಂತ್ರಜ್ಞಾನವನ್ನು ಬಳಸಿ ರೋಪ್‌ವೇ ನಿರ್ಮಾಣ ಮಾಡಿದರೆ ಅಂದಾಜು 182 ರಿಂದ 240 ಕೋಟಿ ರೂ. ವೆಚ್ಚವಾಗಲಿದೆ. ಒಮ್ಮೆಗೆ 10 ಜನ ಪ್ರಯಾಣಿಕರು ಕೇಬಲ್ ಕಾರಿನಲ್ಲಿ ತಲುಪಬಹುದು ಎಂದು ವಿವರಿಸಿದರು.
ಕೇಂದ್ರ ಜಲಸಾರಿಗೆ ಇಲಾಖೆಯು ಶೇ.20ರಷ್ಟು ಹಣವನ್ನು ಈ ರೋಪ್‌ವೇ ಯೋಜನೆಗೆ ಹಣ ನೀಡಲಿದ್ದು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸರಹದ್ದಿನಲ್ಲಿ ಬರಲಿದೆ. ಎರಡು ಜಿಲ್ಲೆಗಳ ಕಂದಾಯ ಅಧಿಕಾರಿಗಳಿಗೆ ಅಗತ್ಯ ಜಮೀನನ್ನು ಸ್ವಾಧಿನಪಡಿಸಿಕೊಂಡು ನೀಡುವಂತೆ ಸಚಿವರು ನಿರ್ದೇಶಿಸಿದರು.
ಈ ಯೋಜನೆಯು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. 30 ವರ್ಷಗಳಿಂದ ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಬಗ್ಗೆ ಮಾತನಾಡಲಾಗುತ್ತಿದೆ. ದಿವಂಗತ ಶಂಕರನಾಗ್ ಅವರು ಮೂರು ದಶಕಗಳ ಹಿಂದೆಯೇ ಈ ಯೋಜನೆಯ ಕನಸು ಕಂಡಿದ್ದರು. ಇದೀಗ ಕಾಲ ಕೂಡಿಬಂದಿದ್ದು, ಮುಂದಿನ ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲಾಗುವುದು ಎಂದರು.
ದೇಶದ ಇತರ ರಾಜ್ಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೋಪ್‌ವೇಗಳನ್ನು ನಿರ್ಮಾಣ ಮಾಡಲಾಗಿದೆ. ಯಾವುದಾದರು ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ನಂದಿ ಗಿರಿಧಾಮ ಯೋಜನೆಯನ್ನು ನೀಡಲಾಗುವುದು ಎಂದು ಸಚಿವರು ಇದೇ ವೇಳೆ ಹೇಳಿದರು.
ಎರಡನೇ ಹಂತದಲ್ಲಿ ನಂದಿ ಬೆಟ್ಟ ಹಾಗೂ ಸ್ಕಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರೋಪ್‌ವೇ ನಿರ್ಮಾಣ ಮಾಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಶಿವಗಂಗೆ, ಮಧುಗಿರಿಯ ಏಕಶಿಲಾ ಬೆಟ್ಟ ಹಾಗೂ ಗುಂಡಿಬಂಡೆಯ ಆವಲಬೆಟ್ಟಗಳಿಗೆ ರೋಪ್‌ವೇ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೇ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮತ್ತು ಐಡೆಕ್ ಸಂಸ್ಥೆಯ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ತಹಸೀಲ್ದಾರಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post