ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ಗ್ರಾಮಾಂತರ |
ಮೀನು ಉತ್ತಮ ಜೈವಿಕ ಆಹಾರಗಳಲ್ಲಿ ಪ್ರಮುಖವಾದುದು. ಮೀನುಗಾರಿಕೆಯಲ್ಲಿ ಹೊಸ ತಾಂತ್ರಿಕತೆಗಳ ಅಳವಡಿಕೆ ಹಾಗೂ ಮೀನುಗಾರರ ಬದುಕಿನಲ್ಲಿ ಸಾಮಾಜಿಕ, ಆರ್ಥಿಕ ಬದಲಾವಣೆ ತರಲು ಜಾರಿಯಾಗಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಹೊಸಕೋಟೆ ತಾಲೂಕಿನ ಹೆಮ್ಮಂಡನಹಳ್ಳಿ ಮಹಿಳಾ ಮೀನುಗಾರರೊಬ್ಬರು ತಮ್ಮ ಸ್ವಂತದ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಜೈವಿಕ ಕೊಳ ನಿರ್ಮಿಸಿಕೊಂಡು ಬಯೋಫ್ಲಾಕ್ ವಿಧಾನದಡಿ ಮೀನುಗಾರಿಕೆ ಮಾಡಲು ಮುಂದಾಗಿದ್ದಾರೆ. ಹೆಮ್ಮಂಡನಹಳ್ಳಿಯ ಭೈರಮ್ಮ ಕೃಷ್ಣಪ್ಪ ಅವರು ತಲಾ 10 ಗುಂಟೆಗಳ ಎರಡು ಘಟಕಗಳನ್ನು ನಿರ್ಮಿಸಿಕೊಂಡು ಮೀನು ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಸೌಭಾಗ್ಯ ಆನಂದ ಎಂಬ ಮಹಿಳಾ ಮೀನುಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದಾರೆ.

ಬಯೋಫ್ಲೋಕ್ ಎಂದರೇನು?
ಬಯೋಫ್ಲೋಕ್ ಅಂದರೆ ಸರಳವಾಗಿ ಹೇಳುವದಾದರೆ ‘ಪ್ರಯೋಜನಾಕಾರಿ ಸೂಕ್ಷಜೀವಿಗಳ ಒಟ್ಟುಗೂಡು’ ಪದರಗಟ್ಟು ಅಥವಾ ಜೈವಿಕ ಹೆಪ್ಪುಗಟ್ಟುವಿಕೆ ಎನ್ನಬಹುದು. ಅನ್ಯಪೌಷ್ಟಿಕತೆಯನ್ನವಲಂಬಿಸಿದ (heterotrophic) ಸೂಕ್ಷ್ಮ ಜೀವಿಗಳ ಗುಂಪು ಇದಾಗಿದ್ದು ಸಾಮಾನ್ಯವಾಗಿ ಇಂಗಾಲ ಮತ್ತು ಸಾರಜನಕ ಪ್ರಮಾಣವನ್ನು ನಿರ್ವಹಿಸುವ ಮೂಲಕ ಪರಿಸರದಲ್ಲಿ ಇದರ ಬೆಳವಣಿಗೆಯನ್ನು
ನಿರ್ವಹಿಸಬಹುದಾಗಿದೆ.

ಬಯೊಫ್ಲೋಕ್ ವಿಧಾನವನ್ನು ತ್ಯಾಜ್ಯ ನೀರಿನ ಸಂಸ್ಕರಣೆಗಾಗಿ ಬಳಸಲಾಗುತ್ತಿತ್ತು, ಇತ್ತೀಚೆಗೆ ಜಲಕೃಷಿಯಲ್ಲಿ ಇದು ಒಂದು ವಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಯೋಫ್ಲೋಕ್ ಕೃಷಿಯು ಒಂದು ತೀವ್ರವಾದ ಜಲಕೃಷಿ ವ್ಯವಸ್ಥೆಯಾಗಿದೆ. ಇದು ಜಲಚರ ಜೀವಿಗಳು ಹೊರಹಾಕುವ ತ್ಯಾಜ್ಯವನ್ನು ಬಳಸಿಕೊಂಡು ಬಯೋಫ್ಲೋಕ್ ಬೆಳೆಯುವಂತೆ ಮಾಡಿ ಅದನ್ನು ಮೀನು/ಸೀಗಡಿಗಳು ಆಹಾರವಾಗಿ ಬಳಕೆಯಾಗುವಂತೆ ಮಾಡುವ ತಂತ್ರವಾಗಿದೆ. ಈ ಬಯೋಫ್ಲಾಕ್ ಪ್ರೋಟೀನ್ (ಒಣ ದ್ರವ್ಯದ ಆಧಾರದ ಮೇಲೆ ಶೇ.50 ರಿಂದ 65), ವಿಟಮಿನ್‌ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆಯಲ್ಲದೆ ಪ್ರೋಬಯಾಟಿಕ್ ಪರಿಣಾಮವನ್ನು ಹೊಂದಿದೆ.
ಸಾಮಾನ್ಯವಾಗಿ, ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಒಂದು ಕೆಜಿ ಮೀನು ಬೆಳೆಸಲು ಸುಮಾರು 1.5 ಕೆ.ಜಿ.ಯಿಂದ 2 ಕೆಜಿಯವರೆಗೆ ಕೃತಕ ಆಹಾರದ ಅವಶ್ಯಕತೆಯಿರುತ್ತದೆ. ಆದರೆ, ಬಯೋಫ್ಲೋಕ್ ತಂತ್ರಜ್ಞಾನದಲ್ಲಿ, ಕೃತಕ ಆಹಾರದ ಬಳಕೆ ಶೇಕಡ 30 ರವರೆಗೆ ಕಡಿಮೆಯಾಗುತ್ತದೆ.ಸಾಂಪ್ರದಾಯಿಕ ಜಲಕೃಷಿಯಲ್ಲಿ, ನೀರಿನ ವಿನಿಮಯವು ಆಗಾಗ್ಗೆ ಅಗತ್ಯವಿರುತ್ತದೆ. ಇದರ ಪರಿಣಾಮವಾಗಿ ನೀರು ವ್ಯರ್ಥವಾಗುತ್ತದೆ ಮತ್ತು ದೊಡ್ಡ ಪ್ರಮಾಣದ ವೆಚ್ಚ ಭರಿಸುವ ಸಂಭವವಿರುತ್ತದೆ. ಬಯೋಫ್ಲೋಕ್ ತಂತಜ್ಞಾನ ಅಳವಡಿಕೆಯಿಂದ ನೀರನ್ನು ವಿನಿಮಯ ಮಾಡುವ ಅಗತ್ಯ ಕಡಿಮೆಯಾಗುತ್ತದೆ.

ಹೆಚ್ಚಿನ ವಿವರಗಳಿಗೆ ದೂ.080-29787456 ,ಮೊ.9341347440 ಸಂಪರ್ಕಿಸಬಹುದು. fisheries.Karnataka.gov.in ವೆಬ್‌ಸೈಟ್ ವಿಳಾಸಕ್ಕೂ ಭೇಟಿ ನೀಡಬಹುದು.












Discussion about this post