ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು, ತಮ್ಮ ನಿವಾಸದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುವ ವೇಳೆ ಕುಸಿದು ಬಿದ್ದು, ಪ್ರಜ್ಞಾಹೀನರಾಗಿದ್ದರು. ಆನಂತರ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದರೂ, ನಿನ್ನೆ ರಾತ್ರಿಯಿಂದ ಕೋಮಾ ಸ್ಥಿತಿಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
1938ರಲ್ಲಿ ಜನಿಸಿದ ಎಸ್. ಶಿವರಾಮ್ (ಜನನ 1938) ಅವರು ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದರು. ಇವರು ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ.
ತನ್ನ ಸಹೋದರ ಎಸ್. ರಾಮನಾಥನ್ ಅವರೊಂದಿಗೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ ಬಾಲಿವುಡ್ ಚಿತ್ರ ಕೂಡಾ ಸೇರಿದೆ. ಇವರು ನಟನಾಗಿ ಹಲವಾರು ದಿಗ್ಗಜರೊಂದಿಗೆ ಅದರಲ್ಲೂ ಮುಖ್ಯವಾಗಿ ಪುಟ್ಟಣ್ಣ ಕಣಗಾಲ್ರಂಥವರೊಂದಿಗೆ ಕೆಲಸ ಮಾಡಿದ್ದಾರೆ. ಇವರನ್ನು ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಎಂದೇ ಪ್ರೀತಿಯಿಂದ ಕರೆಯಲಾಗುತ್ತದೆ.
ಶಿವರಾಮ ಅವರು ಮದ್ರಾಸ್ ಪ್ರಾಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ ಒಂದು ಮಧ್ಯಮ ವರ್ಗ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ತಮ್ಮ ಸೋದರನ ಜೊತೆಗೆ ನಗರದ ಬೆಂಗಳೂರಿಗೆ ತೆರಳಿದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ, ಶಿವರಾಮರು ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.
1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು. ರಾ. ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು. ಅವರು ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದರು. ಶಿವರಾಮ ಮೊದಲ ಬಾರಿ ಬೆಳ್ಳಿ ಪರದೆಯ ಮೇಲೆ 1965ರಲ್ಲಿ ಕು. ರಾ. ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ ಮತ್ತು ಸಹನಿರ್ಮಾಣದ ಬೆರೆತ ಜೀವ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡರು.
ಅಲ್ಲದೇ, ಕೆಎಸ್’ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು.
1958 ರಿಂದ 1965 ರವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು.ರಾ. ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೇಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಚರಿತ್ರ ನಟರಾಗಿ ಅವರ ಅವಿಸ್ಮರಣೀಯ ಅಭಿನಯ ದ ಚಿತ್ರಗಳಲ್ಲಿ ಶರಪಂಜರ, ನಾಗರಹಾವು, ಶುಭಮಂಗಳ ಸೇರಿವೆ. ಇವೆಲ್ಲವೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳು.
ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದಮರಿ ಸೈನ್ಯ, ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದವು. ಡ್ರೈವರ್ ಹನುಮಂತು (1980) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಕನ್ನಡಿಗರು ಎಂದಿಗೂ ಮರೆಯಲಾರರು.
2000 ರ ನಂತರ ವರ್ಷಗಳಲ್ಲಿ ಅವರು ಬರ ಮತ್ತು ತಾಯಿ ಸಾಹೇಬ ದಂತಹ ಸಮಾನಾಂತರ ಚಿತ್ರಗಳಲ್ಲೂ ಎಂದು ಆಪ್ತಮಿತ್ರ, ಹುಚ್ಚದಂತಹ ಪ್ರಮುಖ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅವರು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿಯಲ್ಲೂ ಮತ್ತು ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.
ತಮ್ಮ ಸಹೋದರ ಎಸ್. ರಾಮನಾಥನ್ ಜತೆಗೂಡಿ ರಾಶಿ ಬ್ರದರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(೧೯೮೦) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post