ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಾವ ಮನೆಯಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಇರುವುದೋ ಅಲ್ಲಿ ಬೆಳೆಯುವ ಮಕ್ಕಳು ಸಮಾಜಕ್ಕೆ ಬೆಳಕಾಗುತ್ತಾರೆ ಎಂದು ಹಿರಿಯ ಸಂಸ್ಕೃತ -ವೇದ ವಿದ್ವಾಂಸ ಮತ್ತೂರು ಚಂದ್ರಶೇಖರ ಅವಧಾನಿ ಹೇಳಿದರು.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಸಾಯಿ ಆಟ್ಸ್ ಇಂಟರ್ ನ್ಯಾಷನಲ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಯುವ ಕಲಾವಿದೆ ರಾಧಾ ಶ್ರೀವತ್ಸ ಅವರ ರಂಗಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಗುರುಗಳ ತರಬೇತಿ ಶೈಲಿ, ತಂದೆ- ತಾಯಿಯರಲ್ಲಿ ಇರುವ ಶ್ರದ್ಧೆ, ಮಕ್ಕಳಲ್ಲಿರುವ ಅದಮ್ಯ ಕಲಿಕಾ ಉತ್ಸಾಹಗಳೇ ಬೆಳವಣಿಗೆಗೆ ಪೂಕವಾಗಲಿವೆ. ಈ ನಿಟ್ಟಿನಲ್ಲಿ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರು ಕ್ರಿಯಾಶೀಲ ನರ್ತನ ಪ್ರತಿಭೆಗಳನ್ನು ಕಲಾ ಲೋಕಕ್ಕೆ ನೀಡುತ್ತಿದ್ದಾರೆಂದು ಅವರು ಶ್ಲಾಘಿಸಿದರು.
ಚಿತ್ರನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಕಲಾಭಿವ್ಯಕ್ತಿಯಲ್ಲಿ ಅಚ್ಚುಕಟ್ಟುತನ, ನಾಜೂಕುತನಗಳು ಬಹಳ ಮುಖ್ಯ. ಎಲ್ಲ ಸೌಲಭ್ಯಗಳೂ ಲಭ್ಯವಿರುವ ಕಾಲದಲ್ಲಿ ಅಂತರಂಗದ ಆಸಕ್ತಿಯೇ ಬಹು ಪ್ರಧಾನ. ಈ ದಿಸೆಯಲ್ಲಿ ರಾಧಾ ತೋರಿದ ಅಭಿನಯ ಅಭ್ಯುದಯದ ಸೂಚಕವಾಗಿದೆ ಎಂದರು.
ಹಿರಿಯ ಕಲಾವಿದೆ ಕಲಾಮಂಡಲಂ ಉಷಾ ದಾತಾರ್, ನಟ ನೆ.ಲ . ನರೇಂದ್ರ ಬಾಬು ಮಾತನಾಡಿದರು. ಕಲಾ ಪೋಷಕರಾದ ಸಾಯಿ ವೆಂಕಟೇಶ್, ರಾಧಾ ಅವರ ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಉಪಸ್ಥಿತ ರಿದ್ದರು. ರಾಧಾ ರಂಗಪ್ರವೇಶಕ್ಕೆ ನಟವಾಂಗ- ಗುರು ಸುಪರ್ಣಾ, ಗಾಯನ- ರೋಹಿತ ಭಟ್, ಮೃದಂಗ- ಗುರುಮೂರ್ತಿ, ಕೊಳಲು- ನಿತೀಶ್ ಅಮ್ಮಣ್ಣಾಯ, ವೀಣೆ- ಗೋಪಾಲ್ ಮತ್ತು ರಿದಂ ಪ್ಯಾಡ್ – ಪವನ್ ದತ್ತ ಪಕ್ಕವಾದ್ಯ ಸಹಕಾರ ಪೂರಕವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















