ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ ಕೋವಿಡ್ ಸಮಯದಲ್ಲಿ ರಾಜ್ಯ ಸರಕಾರ ನೀಡಿದ್ದ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಹೋಟೆಲ್ ಗಳಿಗೆ ನೀಡಲು ಬೆಸ್ಕಾಂ BESCOM ಸಮ್ಮತಿಸಿದೆ.
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ನೇತೃತ್ವದ ಸಂಘದ ಪದಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಈ ಭರವಸೆ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಹೋಟೆಲ್ ಮತ್ತು ಫಲಹಾರ ಮಂದಿರಗಳ ವಿವರಗಳನ್ನು ವಲಯವಾರು ನೀಡಿದಲ್ಲಿ ಏಪ್ರಿಲ್ 2021 ರಿಂದ ಜೂನ್ 2021 ರ ಅವಧಿಯವರೆಗಿನ ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಯನ್ನು ಪಡೆಯಬಹುದು ಎಂದು ಬೆಸ್ಕಾಂ ಎಂಡಿ ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಹೋಟೆಲ್ ಮತ್ತ್ತು ಫಲಹಾರ ಮಂದಿರಗಳಿಗೆ 3 ತಿಂಗಳ ಕಾಲ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ ನೀಡಿ ರಾಜ್ಯ ಸರಕಾರ ಆಗಸ್ಟ್ 16, 2021 ರಂದು ಆದೇಶಿಸಿತ್ತು. ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ.
ಹೋಟೆಲ್ ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಬೆಸ್ಕಾಂ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಪ್ರಕೃತಿ ವಿಕೋಪದಂತಹ ಸಂದರ್ಭಗಳನ್ನು ಹೊರತು ಪಡಿಸಿ ಹೋಟೆಲ್ ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ.
ಕುಂಬಳಗೋಡು ಪ್ರದೇಶದಲ್ಲುಂಟಾಗಿರುವ ವಿದ್ಯುತ್ ವ್ಯತ್ಯಯದ ಕುರಿತು ಹೋಟೆಲ್ ಸಂಘದ ಪದಾಧಿಕಾರಿಗಳು ಬೆಸ್ಕಾಂ ಗಮನಕ್ಕೆ ತಂದಿದ್ದು, ವಿಪರೀತ ಗಾಳಿ ಮಳೆಗೆ 300 ಕ್ಕೂ ಹೆಚ್ಚು ಮರಗಳು ಮತ್ತು 150 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದ್ದರಿಂದ ಕುಂಬಳಗೋಡು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ದುರಸ್ಥಿಗೊಂಡಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಆ ಪ್ರದೇಶದಲ್ಲಿನ ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಎಂಡಿ ಮಾಹಿತಿ ನೀಡಿದರು.
ಕುಂಬಳಗೋಡು ಪ್ರದೇಶದಲ್ಲಿ ಈಗಿರುವ ಟ್ರಾನ್ಸ್ ಫಾರ್ಮರ್ ಅನ್ನು ಮೇಲ್ದರ್ಜೆಗೆ ಏರಿಸಲು ಕೆಪಿಟಿಸಿಎಲ್ ಕಾರ್ಯಪ್ರವರ್ತವಾಗಿದ್ದು, ಈ ಕೆಲಸ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಸ್ಕಾಂ ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದೆ.
ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆ ಗಳನ್ನು ಮುಂದಿನ ದಿನಗಳಲ್ಲಿ ಬೆಸ್ಕಾಂ ಗಮನಕ್ಕೆ ತಂದರೆ ಆದ್ಯತೆ ಮೇರೆಗೆ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ.
ಎಫ್ ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್ ಮತ್ತು ಹೋಟೆಲ್ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post