ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ ೨೧ರಂದು ೨೨೪ ವಿಧಾನಸಭಾ ಕ್ಷೇತ್ರಗಳ ವಿವಿಧ ಹಿಂದುಳಿದ ಸಮುದಾಯಗಳ 8 ಜನ ಪ್ರಮುಖರ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ವತಿಯಿಂದ ಬೆಂಗಳೂರಿನ ವಸಂತ್ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ಕಾರ್ಯಕರ್ತರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದುಳಿದ ಸಮಾಜಗಳ ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ಸಚಿವರು, ವಿಧಾನಪರಿಷತ್ ಮಾಜಿ ಸದಸ್ಯರು ಸೇರಿದಂತೆ ಒಬಿಸಿ ಮೋರ್ಚಾ ಪದಾಧಿಕಾರಿಗಳು ಸೇರಿ ಸುಮಾರು 2ರಿಂದ 2,500 ಜನರು ಇದರಲ್ಲಿ ಭಾಗವಹಿಸಲಿದ್ದು, ಈ ಸಮಾವೇಶಕ್ಕೆ ಅರ್ಹರನ್ನು ಗುರುತಿಸಿ ಆಹ್ವಾನಿಸುವ ಕೆಲಸವನ್ನು ಮಾಡಬೇಕು. ಇದು ಸಂಘಟನೆಯ ಮೊದಲನೇ ಪ್ರಯತ್ನ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಅವುಗಳ ಬಗ್ಗೆ ತಿಳಿದುಕೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಿ. ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಗರಿಷ್ಠ ಸಂಖ್ಯೆಯ ಹಿಂದುಳಿದ ಸಮಾಜದವರು ಮತ್ತು ದಲಿತರಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಸಮರ್ಪಿಸಿದರು. ಬಿಜೆಪಿ ಹಿಂದೆಯೂ ಹಿಂದುಳಿದ ಸಮಾಜಗಳ ಮಠಗಳಿಗೆ 100 ಕೋಟಿ ಅನುದಾನ ನೀಡಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್, ಆಸ್ಪತ್ರೆ ಸೇರಿದಂತೆ ವಿವಿಧ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳೂ ನಡೆದಿವೆ ಎಂದರು.
ಹಿಂದುಳಿದ ಸಮಾಜ, ಜನಪ್ರತಿನಿಧಿಗಳು ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಮೋರ್ಚಾ ಕೆಲಸ ಮಾಡಬೇಕು. ಕುಟುಂಬ, ಜಾತಿಯ ಅಭಿವೃದ್ಧಿಯಿಂದ ಹಿಂದುತ್ವದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಾತಿಯ ಸಂಘಟನೆಗಳ ಸಮಾವೇಶದಲ್ಲಿ ಭಾಗವಹಿಸುವುದು ತಪ್ಪಲ್ಲ. ಒಂದು ಕಾಲದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ಕಾಂಗ್ರೆಸ್ ಜೊತೆಗಿದ್ದರು. ಕಾಂಗ್ರೆಸ್ ಜಾತಿ, ಮತ ರಾಜಕೀಯವನ್ನು ನೆಚ್ಚಿಕೊಂಡಿದೆ. ಈಗ ಹಿಂದುಳಿದವರು ಮತ್ತು ದಲಿತರಲ್ಲಿ ಶೇ ೭೦ಕ್ಕೂ ಹೆಚ್ಚು ಜನರು ಬಿಜೆಪಿ ಜೊತೆಗಿದ್ದಾರೆ. ರಾಷ್ಟಿಯವಾದ ಮುಸ್ಲಿಮರು ಬಿಜೆಪಿ ಜೊತೆಗಿದ್ದಾರೆ. ಅವರೆಲ್ಲರೂ ನರೇಂದ್ರ ಮೋದಿಯವರು, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ನಮ್ಮ ಜೊತೆಗಿದ್ದಾರೆ ಎಂದು ಹೇಳಿದರು.
ಕಂಬಳಿ ವಿಚಾರ ಮೇಲೆತ್ತಿ ಸ್ವಲ್ಪವಾದರೂ ಮತ ಪಡೆಯಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಅಷ್ಟು ವರ್ಷ ಆಡಳಿತದಲ್ಲಿದ್ದರೂ ಕಾಂಗ್ರೆಸ್‌ಗೆ ವಾಲ್ಮೀಕಿ, ಸಂಗೊಳ್ಳಿ ರಾಯಣ್ಣ ಅವರ ನೆನಪಾಗಲಿಲ್ಲ. ಎಲ್ಲ ಸಮಾಜದಲ್ಲೂ ಮಹಾತ್ಮರಿದ್ದಾರೆ. ಅವರ ಕೊಡುಗೆ, ಜೀವನಾದರ್ಶವನ್ನು ತಿಳಿಸುವ ಕೆಲಸ ನಮ್ಮ ಮೋರ್ಚಾದಿಂದ ನಡೆಯಲಿ ಎಂದು ತಿಳಿಸಿದರು.
ಒಬಿಸಿ ಮೋರ್ಚಾದ ರಾಷ್ಟಿಯ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಎ ಸುವರ್ಣ ಅವರು ಮಾತನಾಡಿ, ದೇಶದಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಸರಕಾರಗಳು ಹಿಂದುಳಿದ ವರ್ಗದವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡವು. ಆದರೆ, ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಹಿಂದುಳಿದ ವರ್ಗದ ನಿಜವಾದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರಿಂದ ಹಿಂದುಳಿದ ವರ್ಗಗಳು ಈಗ ಬಿಜೆಪಿಯನ್ನು ಬೆಂಬಲಿಸುತ್ತಿವೆ ಎಂದರು.
ಒಬಿಸಿ ಮೋರ್ಚಾದ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮಾತನಾಡಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಪರಿಕಲ್ಪನೆಯನ್ನು ನನಸಾಗಿಸಲು ಒಬಿಸಿ ಮೋರ್ಚಾ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯ ಕನಸು ನನಸಾಗುವತ್ತ ನಡೆದಿದೆ ಎಂದು ವಿವರಿಸಿದರು. ದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಲು ಪ್ರಧಾನಿಯವರು ಶ್ರಮಿಸುತ್ತಿದ್ದಾರೆ. ಹಿಂದೆ ಆಡಳಿತ ಮಾಡಿದ ಸರಕಾರಗಳು ಈ ವರ್ಗವನ್ನೇ ಕಡೆಗಣಿಸಿದ್ದವು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ವಿಧಾನಪರಿಷತ್ ಸದಸ್ಯರಾದ ರಘುನಾಥ್ರಾವ್ ಮಲ್ಕಾಪುರೆ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ನೂರೊಂದುಶೆಟ್ಟಿ, ಮಾಜಿ ಸಂಸದರಾದ ವಿರೂಪಾಕ್ಷಪ್ಪ, ಸಿ.ಎಸ್. ವಿಜಯಶಂಕರ್, ವಿಶ್ವಕರ್ಮ ನಿಗಮದ ಅಧ್ಯಕ್ಷರಾದ ಬಾಬು ಪತ್ತಾರ್, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post