ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡುತ್ತಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಕಾಂಗ್ರೆಸ್‌ನ ಕೆ.ಪ್ರತಾಪ ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಪ್ಪಿನಂಶ ಇರುವ ಮರಳು ಬಳಕೆಯಿಂದ ಗುಣಮಟ್ಟ ಹಾಳಾಗುತ್ತದೆ ಎಂದು ಸಮಿತಿಯು ನೀಡಿದ ವರದಿ ಆಧಾರದ ಹಿನ್ನೆಲೆಯಲ್ಲಿ ನಾವು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಇತ್ತೀಚೆಗೆ ಮತ್ತೆ ಈ ಮರಳನ್ನು ಬಳಸಲಾಗುತ್ತಿದೆ ಎಂದಾಗ ಉತ್ತರ ನೀಡಿದ ಸಚಿವರು ನದಿಯ ನೀರು ಸಮುದ್ರಕ್ಕೆ ಸೇರುವ ಕಡೆಗಳಲ್ಲಿ ಮರಳು ದಿಬ್ಬದಿಂದ ಮರಳನ್ನು ಸಂಗ್ರಹಿಸಲಾಗುತ್ತದೆ. ಅದರ ಗುಣಮಟ್ಟ ಪರಿಶೀಲಿಸಿ ಲವಣಾಂಶ ಇಲ್ಲದೆ ಇರುವ ಮರಳನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ ಜಡ್ ) ಪ್ರದೇಶಗಳಲ್ಲಿ 2018 ರಿಂದ 2021ರ ವರೆಗೆ 49 ಬ್ಲಾಕ್‍ಗಳಲ್ಲಿ 12.71 ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‍ಗಳನ್ನು ಗುರುತಿಸಿದ್ದೇವೆ. ಇದೇ ರೀತಿ ಉಡುಪಿ ಜಿಲ್ಲೆಯಲ್ಲಿ 2018 ರಿಂದ 2021ರ ವರೆಗೆ 28 ಬ್ಲಾಕ್‍ಗಳಲ್ಲಿ 3.47 ಲಕ್ಷ ಮೆಟ್ರಿಕ್ ಟನ್ ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ ಎಂದರು.

ಉಡುಪಿಯಲ್ಲಿ 2018-19ರಲ್ಲಿ 8 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಪೈಕಿ 1.41 ಮೆಟ್ರಿಕ್ ಟನ್ ವಿತರಣೆ ಮಾಡಿ 84.84 ಲಕ್ಷ ರಾಜಸ್ವವನ್ನು ಸಂಗ್ರಹಿಸಲಾಗಿದೆ. 2019-20ರಲ್ಲಿ 8.50 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಪೈಕಿ 4.23 ಲಕ್ಷ ಮೆಟ್ರಿಕ್ ಟನ್ ವಿತರಿಸಿದ್ದೇವೆ. ಇದೇ ವರ್ಷ 253.85 ಲಕ್ಷ ರಾಜಸ್ವವನ್ನು ಸಂಗ್ರಹಿಸಲಾಗಿದೆ. ಪ್ರಸಕ್ತ ವರ್ಷದ ಫೆಬ್ರವರಿ ಅಂತ್ಯಕ್ಕೆ 9 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಇದರಲ್ಲಿ 4.86 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದ್ದು, 393.85 ಲಕ್ಷ ರಾಜಸ್ವ ಸಂಗ್ರಹಣೆಯಾಗಿದೆ ಎಂದು ಹೇಳಿದರು.
2018-19ರಲ್ಲಿ 182 ಪ್ರಕರಣಗಳನ್ನು ಪತ್ತೆಹಚ್ಚಿ 130 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದರಲ್ಲಿ 37.60 ಲಕ್ಷ ದಂಡ ವಸೂಲಿ ಮಾಡಿ 9138 ಲಕ್ಷ ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿದೆ. 2019-20ರಲ್ಲಿ 144 ಪ್ರಕರಣಗಳನ್ನು ಪತ್ತೆಹಚ್ಚಿ 127 ಮೊಕದ್ದಮೆ ದಾಖಲಾಗಿ 9.66 ಲಕ್ಷ ದಂಡ ವಸೂಲಿ ಮಾಡಿ 4747 ಲಕ್ಷ ಮೆಟ್ರಿಕ್ ಟನ್ ವಶಪಡಿಸಿಕೊಳ್ಳಲಾಗಿದೆ. ಫೆಬ್ರವರಿ ಅಂತ್ಯಕ್ಕೆ 155 ಪ್ರಕರಣಗಳನ್ನು ಪತ್ತೆಹಚ್ಚಿ 11 ಮೊಕದ್ದಮೆಗಳನ್ನು ದಾಖಲಿಸಿ 53.98 ಲಕ್ಷ ವಶಪಡಿಸಿಕೊಂಡು 6197 ಲಕ್ಷ ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.
ಉಡುಪಿಯಲ್ಲಿ 2018-19ರಲ್ಲಿ 110 ಪ್ರಕರಣ ಪತ್ತೆಯಾಗಿ, 83 ಮೊಕದ್ದಮೆ ದಾಖಲಾಗಿದ್ದವು. ಇದರಲ್ಲಿ 23.50 ಲಕ್ಷ ದಂಡ ವಸೂಲಿ ಜತೆಗೆ 116.50 ಲಕ್ಷ ಮೆಟ್ರಿಕ್ ಟನ್ ಮರಳನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. 2019-20ರಲ್ಲಿ 306 ಪ್ರಕರಣಗಳ ಪೈಕಿ 152 ಮೊಕದ್ದಮೆ ದಾಖಲಾಗಿ ₹ 81.60 ಲಕ್ಷ ದಂಡ ವಸೂಲಿ, 991 ಲಕ್ಷ ಮೆಟ್ರಿಕ್ ಟನ್ ಮರಳು ಹಿಂಪಡೆಯಲಾಗಿದೆ. ಫೆಬ್ರವರಿ ಅಂತ್ಯಕ್ಕೆ 162 ಪ್ರಕರಣನ್ನು ಪತ್ತೆಹಚ್ಚಿ 32 ಮೊಕದ್ದಮೆಗಳನ್ನು ದಾಖಲಿಸಿದ್ದೇವೆ. ಇದರಲ್ಲಿ 36.70 ಲಕ್ಷ ದಂಡ ವಸೂಲಿ ಹಾಗೂ 418 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಲಾಗಿದೆ. ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಜಿಲೆಟಿನ್ ಸೇರಿದಂತೆ ಇನ್ನಿತರ ಸ್ಫೋಟಕಗಳನ್ನು ಪೆÇಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸುವಂತೆ ಮತ್ತೊಮ್ಮೆ ಎಚ್ಚರಿಕೆ ನೀಡುವುದಾಗಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ವಿಧಾನ ಪರಿಷತ್‍ನಲ್ಲಿ ಸದಸ್ಯ ವಿಜಯಸಿಂಗ್ ಪರವಾಗಿ ಅರವಿಂದ ಕುಮಾರ್ ಅರಳಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲ್ಲು ಕ್ವಾರಿ ಸ್ಫೋಟ ಪ್ರಕರಣ ಪುನರಾವರ್ತಿತವಾಗದಂತೆ ಬಿಗಿ ಕ್ರಮ ಕೈಗೊಂಡಿದೆ. ಅಕ್ರಮ ಸ್ಫೋಟಕಗಳ ಸಂಗ್ರಹಿಸುವವರು, ಸಾಗಿಸುವವರು ಬಳಸುವವರ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಎಲ್ಲಾ ರಾಜ್ಯಗಳಲ್ಲಿ ಅಕ್ರಮ ಸಂಗ್ರಹಣೆಯನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 16 ಕ್ವಿಂಟಾಲ್ ಜಿಲೆಟಿನ್ ಸಂಗ್ರಹವಾಗಿರುವುದು ನಿಜ. ಎಫ್‍ಐಆರ್ ದಾಖಲಿಸಿ ಇದರ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಮಾಲೀಕರ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಯಮಿತವಾಗಿ ನಿಗದಿತ ದರದಲ್ಲಿ ಮರಳು ಪೂರೈಕೆ ಮಾಡುವ ಸಂಬಂಧ 5.5.2020ರಂದು ನೂತನ ಮರಳು ನೀತಿಯನ್ನು ಜಾರಿ ಮಾಡಲಾಗಿದೆ. 1, 2 ಮತ್ತು 3ನೆ ಶ್ರೇಣಿಯ ಹಳ್ಳ, ತೊರೆ, ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳೀಯ ಜನರು ಸಾರ್ವಜನಿಕ ಮತ್ತು ಸರ್ಕಾರಿ ಕಟ್ಟಡಗಳಿಗೆ ಮರಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದೇವೆ. ರಾಜ್ಯದಲ್ಲಿ 193 ಮರಳು ಪ್ರದೇಶಗಳನ್ನು ಗುರುತಿಸಿದ್ದು, ಈ ಪೈಕಿ 87 ಮರಳು ಬ್ಲಾಕ್‍ಗಳನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಪ್ರವಾಹದಿಂದ ಪಟ್ಟಾ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು 301 ಪಟ್ಟಾದಾರರಿಗೆ ಅನುಮತಿ ನೀಡಿ 84.796 ಮೆಟ್ರಿಕ್ ಟನ್ ಮರಳನ್ನು ವಿಲೇವಾರಿ ಮಾಡಿದ್ದೇವೆ ಎಂದು ಸಚಿವ ನಿರಾಣಿ ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post