ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೀದರ್ ಜಿಲ್ಲೆಯಲ್ಲಿ ಕೈಗಾರಿಕಾ ತ್ಯಾಜ್ಯವನ್ನು ಕೊಳವೆ ಬಾವಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದು ತಿಂಗಳುಗಳೇ ಕಳೆದಿದ್ದರೂ ಕ್ರಮ ವಹಿಸದ ಅಧಿಕಾರಿಗಳನ್ನು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ Minister Khandre ತರಾಟೆಗೆ ತೆಗೆದುಕೊಂಡರು.
ಕೆಲವು ಕಾರ್ಖಾನೆಗಳು ವಿಷಯುಕ್ತ ತ್ಯಾಜ್ಯವನ್ನು ಕೊಳವೆ ಬಾವಿ ಮತ್ತು ಸಣ್ಣ ಕೆರೆ ಹಾಗೂ ಹಳ್ಳಗಳಲ್ಲಿ ಬಿಡುತ್ತಿರುವ ಕಾರಣ ಕಲುಷಿತವಾಗುತ್ತಿರುವ ನೀರು ಕುಡಿದು ಜಾನುವಾರುಗಳು ಸಾವಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ, ಹೀಗಿದ್ದರೂ ಕ್ರಮ ಏಕೆ ಜರುಗಿಸಿಲ್ಲ. ಜಲ ಕಾಯಿದೆ ಅಡಿಯಲ್ಲಿ ಸ್ಥಾಪನೆ ಆಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ಅಧಿಕಾರಿಗಳ ಪ್ರಥಮ ಪರಿಚಯಾತ್ಮಕ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ರಾಯಚೂರು ಜಿಲ್ಲೆಯಲ್ಲಿ ಕಳೆದ 5 -6 ತಿಂಗಳ ಹಿಂದೆ ಕಲುಷಿತ ನೀರು ಸೇವಿಸಿ ಐದು ಜನರು ಸಾವೀಗೀಡಾಗಿದ್ದರು. ಆಗಲೇ ಜಲ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಿದ್ದರೆ, ಈಗ ದೇವದುರ್ಗ ತಾಲೂಕು ರೇಕಲಮರಡಿಯಲ್ಲಿ ಮತ್ತೊಂದು ಸಾವು ಸಂಭವಿಸುತ್ತಿರಲಿಲ್ಲ ಎಂದರು.
ಇಂದು ಪರಿಸರ ಮಾಲಿನ್ಯ ದೊಡ್ಡ ಸವಾಲಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ದೃಷ್ಟಿಯಿಂದ ಪರಿಸರ ಉಳಿಸುವ ಗುರುತರ ಜವಾಬ್ದಾರಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲಿದೆ. ಅಧಿಕಾರಿಗಳು ತಮ್ಮ ತಮ್ಮ ಕಚೇರಿಯ ವ್ಯಾಪ್ತಿಯಲ್ಲಿ ನಿಯಮಿತವಾಗಿ ಪರಿಶೀಲನೆ ನಡೆಸಿ, ಮಾಲಿನ್ಯ ತಡೆಯಲು ಶ್ರಮಿಸಬೇಕು ಎಂದು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮ ಹವಾಮಾನ, ವಾತಾವರಣ ಇರಬೇಕು ಎಂಬ ಕಾರಣಕ್ಕಾಗಿಯೇ ಸಚಿವರಾಗಿ ಅಧಿಕಾರ ತೆಗೆದುಕೊಂಡ ಮೂರೇ ದಿನಕ್ಕೆ ತಾವು ಬೆಂಗಳೂರಿನ ಅತಿ ದೊಡ್ಡ ಕೆರೆಯಾದ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ, ಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದಾಗಿ ತಿಳಿಸಿದರು.
ಈ ಕೆರೆಯಲ್ಲಿ 3 ಲಕ್ಷ 20 ಸಾವಿರಕ್ಕೂ ಅಧಿಕ ಕ್ಯೂಬಿಕ್ ಮೀಟರ್ ಹೂಳು (ಸಿಲ್ಟ್) ಇದ್ದು, ಇದರಲ್ಲಿ ಪ್ರತಿಶತ್ 52ರಷ್ಟನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆದರೆ, ರಾಸಾಯನಿಕ ಇರುವ ಈ ಮಣ್ಣನ್ನು ತಮ್ಮ ಪ್ರದೇಶದಲ್ಲಿ ಹಾಕದಂತೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಜೊತೆಗೆ ಹಗಲು ಹೊತ್ತಿನಲ್ಲಿ ಇದರ ಸಾಗಾಟ ಸಾಧ್ಯವಿಲ್ಲ. ಹೀಗಾಗಿ ರಾತ್ರಿಯ ವೇಳೆ ಹೆಚ್ಚಿನ ವಾಹನ ಬಳಸಿ ಸಾಗಿಸಲು ಸೂಚಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ ಕೆರೆಯ ಮಾಲಿನ್ಯಕ್ಕೆ ಕಾರಣವಾಗಿರುವ 490 ಕೈಗಾರಿಕೆಗಳು ಮತ್ತು ವಸತಿ ಸಮುಚ್ಛಯಗಳಿಂದ 198 ಕೋಟಿ ರೂ. ಪರಿಹಾರ ವಸೂಲಿ ಮಾಡಬೇಕಾಗಿತ್ತು. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈವರೆಗೆ ಕೇವಲ 5 ಕೋಟಿ ರೂ. ಮಾತ್ರ ಪರಿಹಾರ ವಸೂಲಿ ಮಾಡಿದ್ದಾರೆ. ಹೀಗಾಗಿ ಉಳಿದ ಹಣವನ್ನು ವಸೂಲಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಪ್ಲಾಸ್ಟರಾಫ್ ಪ್ಯಾರೀಸ್ (ಪಿ.ವಿ.ಪಿ.) ಬಳಸಿ ಗಣಪತಿ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಮಂಡಳಿಯ ಅಧ್ಯಕ್ಷ ಎ. ಶಾಂತ ತಿಮ್ಮಯ್ಯ, ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಮಂಡಳಿಯ ಸದಸ್ಯ ಕಾರ್ಯದರ್ಶಿ ಗಿರೀಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post