ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರವಾಗಿದ್ದು ಇದಕ್ಕೆ ಯಾವುದೇ ರೀತಿಯ ಮಿತಿಯಿಲ್ಲ. ಸಂಗೀತದಲ್ಲಿ ಸಾಕಷ್ಟು ಕಲಿಯಬಹುದಾದ ಅಂಶಗಳಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತಿಳಿಸಿದರು.
ಜಯನಗರದ ಜೆಎಸ್‌ಎಸ್ ಅಡಿಟೋರಿಯಂನಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ ವತಿಯಿಂದ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಸ್ಮರಣಾರ್ಥ 17ನೇ ಧ್ವನಿ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಕೆಎಫ್ ಸಂಸ್ಥೆಯು ಪ್ರತಿವರ್ಷ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸಂಸ್ಮರಣ ಸಂಗೀತ್ಸೊತ್ಸವ ಸಂದರ್ಭದಲ್ಲಿ ನಾಡಿನ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದ ಹಾಗೂ ಗುರುವಿಗೆ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಈ ವರ್ಷ ಹಿಂದೂಸ್ತಾನಿ ಸಂಗೀತ ಪ್ರಪಂಚಕ್ಕೆ ಅನುಪಮ ಕೊಡುಗೆ ನೀಡಿರುವ ಪಂಡಿತ್ ಅಜಯ್ ಚಕ್ರವರ್ತಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಖ್ಯಾತ ಸಂಗೀತ ವಿದ್ವಾಂಸ ಪಂಡಿತ್ ಅಜಯ್ ಚಕ್ರವರ್ತಿ ಮಾತನಾಡಿ, ಕರ್ನಾಟಕ ರಾಜ್ಯ ಅತ್ಯಂತ ಗೌರವಯುತವಾದ ರಾಜ್ಯವಾಗಿದೆ. ದೇಶದಲ್ಲಿ ಕೋವಿಡ್ ಸಂದರ್ಭದಲ್ಲಿ ಅನೇಕ ಉತ್ತಮ ಸಂಗೀತಗಾರರನ್ನು ಕಳೆದುಕೊಂಡಿದ್ದೇವೆ. ಮಲ್ಲಿಕಾರ್ಜುನ ಮನ್ಸೂರ್ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಿಸ್ಮಿಲ್ಲಾ ಖಾನ್, ಎಂ.ಎಸ್.ಸುಬ್ಬಲಕ್ಷ್ಮೀ, ಲತಾ ಮಂಗೇಶ್ಕರ್ ಅವರಂತಹ ಅನೇಕರನ್ನು ಸಂಗೀತ ಕ್ಷೇತ್ರ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಖ್ಯಾತ ಗಾಯಕ ಪಂ ಡಾ. ನಾಗರಾಜ್ ರಾವ್ ಹವಲ್ದಾರ್ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಜಿ.ಎ.ಶ್ರೀನಿವಾಸ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು ಕಾರ್ಯಯಕ್ರಮದ ಆರಂಭದಲ್ಲಿ ಧನಂಜಯ ಹೆಗ್ಡೆ ಅವರ ಸಂಗೀತ ಕಛೇರಿ ಏರ್ಪಾಡಾಗಿತ್ತು.
ಕರ್ನಾಟಕದ ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆಯು ಮೂತ್ರ ಜನಕಾಂಗ, ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ಸಂಗೀತ ಉತ್ಸವವಗಳ ಮೂಲಕ ಸಂಗ್ರಹವಾದ ಹಣ ಬಡರೋಗಿಗಳ ಉಚಿತ ಡಯಾಲಿಸಿಸ್ ವೆಚ್ಚವನ್ನು ಭರಿಸಲು ಹಾಗೂ ಬಿಕೆಎಫ್‌ನ ಮೂಲಧನ ಕ್ರೋಢೀಕರಣಕ್ಕೆ ಸಹಾಯಕವಾಗಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಡಾ. ಪಿ. ಶ್ರೀರಾಮ್ ರವರು ತಿಳಿಸಿರುತ್ತಾರೆ. ವಿವರಗಳಿಗೆ : 9901788354ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post