ಬೆಂಗಳೂರು: ಶ್ರೀ ವ್ಯಾಸರಾಜ ಗುರುಸಾರ್ವಭೌಮರ 480ನೇ ಆರಾಧನಾ ಮಹೋತ್ಸವ ನಾಳೆಯಿಂದ ಮೂರು ದಿನಗಳ ಕಾಲ ಎಲ್ಲೆಡೆ ನಡೆಯಲಿದೆ.
ಬೆಂಗಳೂರಿನ ಶ್ರೀನಗರದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಾರ್ಚ್ 23ರಿಂದ 25ರವರೆಗೆ ಅನೇಕ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಶಿಷ್ಠವಾಗಿ ಆಚರಿಸಲಿದೆ.
ಮಾರ್ಚ್ 23ರ ನಾಳೆ ಬೆಳಿಗ್ಗೆ ಶ್ರೀವಾದಿರಾಜರ ಆರಾಧನೆ ಅಂಗವಾಗಿ ಹರಿವಾಯು ಸ್ತುತಿ, ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಸ್ತೋತ್ರ ಪಾರಾಯಣ ಮತ್ತು ಶ್ರೀಮತ್ ದಶಪ್ರಮತಿ ದರ್ಶನ ಪ್ರಕಾಶಿನಿ ವಿದ್ವತ್ ಸಭಾವನ್ನು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಸಂಜೆ ವ್ಯಾಸತ್ರಯಗಳ ವೈಶಿಷ್ಟ್ಯ ಕುರಿತು ವಿಚಾರ ಗೋಷ್ಠಿಯಲ್ಲಿ ಮಹಾಮಹೋಪಾಧ್ಯಾಯ ವಿದ್ವಾನ್ ರಾಜಾ ಎಸ್. ಗಿರಿಆಚಾರ್ಯರ ಅಧ್ಯಕ್ಷತೆಯಲ್ಲಿ ಅನೇಕ ಪಂಡಿತರು ವಿಷಯ ಮಂಡಿಸಲಿದ್ದಾರೆ. ವಿದ್ವಾನ್ ವಿಷ್ಣುದಾಸ ನಾಗೇಂದ್ರಾಚಾರ್ಯರು ಸಭಾ ನಿರ್ವಹಣೆ ಮಾಡಲಿದ್ದಾರೆ.
ಮಾರ್ಚ್ 24 ರ ಭಾನುವಾರ ಶ್ರೀವ್ಯಾಸರಾಜ ಸ್ತೋತ್ರ ಅಷ್ಟೋತ್ತರ ಶತವಾರ ಪಾರಾಯಣ, ಬೆಳಿಗ್ಗೆ ಗೋಪಾಲಃ ಸರ್ವಪಾಲಕಃ (ಶ್ರೀಕೃಷ್ಣ ಮಹಿಮಾ ಚಿಂತನಾ) ಕುರಿತು ತಂಬಿಹಳ್ಳಿ ಮಾಧವತೀರ್ಥ ಮಠದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ವಿದ್ಯಾಸಿಂಧು ಮಾಧವತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ವಿದ್ವತ್ ಸಭಾ ಹಾಗೂ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥ ಶ್ರೀಪಾದರು ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಲಿದ್ದಾರೆ.
ಸಂಜೆ ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಮತ್ತು ಶ್ರೀ ರಾಘವೇಂದ್ರಸ್ವಾಮಿ ಬೃಂದಾವನ ಟ್ರಸ್ಟ್, ಶ್ರೀನಗರ ಅಧ್ಯಕ್ಷರಾದ ಎ.ಆರ್. ಆಚಾರ್ ಅವರು ಭಾಗವಹಿಸಲಿದ್ದಾರೆ.
ಮಾರ್ಚ್ 25ರ ಸೋಮವಾರ ಬೆಳಿಗ್ಗೆ ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ, ಹರಿದಾಸ ಪರಂಪರೆಗೆ ಶ್ರೀವ್ಯಾಸರಾಜರ ಕೊಡುಗೆ ಕುರಿತು ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಯು ನಡೆಯಲಿದೆ.
ಸಂಜೆ ವಿದ್ವಾನ್ ಸುಮುಖ ಮೌದ್ಗಲ್ಯ, ಮೈಸೂರು ರವರಿಂದ ಸಂಗೀತ ನಂತರ ಹರಿದಾಸ ಸಾಹಿತ್ಯ ಶಾಸ್ತ್ರಾರ್ಥ ವಿಚಾರ (ಹರಿದಾಸ ಸಾಹಿತ್ಯದ ಅನಿವಾರ್ಯತೆ, ವೈಶಿಷ್ಟ್ಯ, ಶಾಸ್ತ್ರಾರ್ಥ, ಲೋಕನೀತಿ ಮತ್ತು ಭಕ್ತಿ) ಕುರಿತು ವಿಜಯ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಮತ್ತು ಹಿರಿಯ ದಾಸಸಾಹಿತ್ಯ ಸಂಶೋಧಕ ಡಾ. ಅನಂತ ಪದ್ಮನಾಭರಾವ್ ಅಧ್ಯಕ್ಷತೆಯಲ್ಲಿ ವಿದ್ವತ್ ಗೋಷ್ಠಿ ಆಯೋಜಿಸಿದೆ ಎಂದು ಶ್ರೀ ವಿದ್ಯಾವಿಜಯ ತೀರ್ಥ ಶಿಷ್ಯ ವೃಂದ ತಿಳಿಸಿದೆ.
ಕಾರ್ಯಕ್ರಮಗಳ ಕುರಿತಾಗಿ ವಿವರಗಳಿಗೆ 8904776177/9148596146 /9663015544 ಗೆ ಸಂಪರ್ಕಿಸಬಹುದು.
Discussion about this post