ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದ ಶ್ರೀ ರಾಘವೇಂದ್ರ ಸ್ವಾಮಿಗಳು #Shri Raghavendra Swamy ಫೋಟೋ ಸ್ವೀಕರಿಸಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರಿಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ #Jaggesh ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಕಿಡಿ ಕಾರಿರುವ ಅವರು, ರಾಯರನ್ನು ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲ, ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ, ಎದ್ದು ಬರುತಾರೆ ಕಾಯಬೇಕು ಎಂದಿದ್ದಾರೆ.
ರಾಯರ ಫೋಟೋ ನಿರಾಕರಿಸಿದ ಸಿಎಂ
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಡಲು ಮುಂದಾದರು. ಆದರೆ, ಇದನ್ನು ನೋಡಿದ ಸಿಎಂ, ಫೋಟೋವನ್ನು ವಾಪಾಸ್ ಕೊಟ್ಟು ಆತನ ವಿರುದ್ದ ಕೋಪದಿಂದ ನೋಡಿದ್ದಾರೆ. ಇದೇ ವೇಳೆ, ಚಾಣಕ್ಯನ ಕುರಿತಾದ ಪುಸ್ತಕವನ್ನು ಅಭಿಮಾನಿಯೊಬ್ಬ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ರಾಯರ ಫೋಟೊ ತಿರಸ್ಕರಿಸಿದ್ದೂ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಪಕ್ಷ ನಾಯಕ ಅಶೋಕ್ ಆಕ್ರೋಶ
ಇನ್ನು, ರಾಯರ ಫೋಟೋ ಸ್ವೀಕರಿಸಲು ನಿರಾಕರಿಸಿದ ಸಿದ್ದರಾಮಯ್ಯ ನಡೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ #R Ashok ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯಗೆ ಹಿಂದೂ ದೇವರನ್ನು ಕಂಡರೆ ಆಗಿ ಬರಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೇ ಆಗಿ ಬರುವುದಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡಿದರು, ಆಗ ಕೋಮು ಗಲಭೆಗಳು ಆದವು. ಕೋಗಿಲು ಲೇಔಟ್ ಮುಸ್ಲಿಮರಿಗೆ ಮನೆಗಳು ಕೊಡುವುದು ಇತ್ಯಾದಿ ಅದು ಅವರ ನಿರಂತರ ಪ್ರಕ್ರಿಯೆ ಎಂದು ಕಿಡಿಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















