ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ #Banu Mushtaq ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರ ಕೃತಿ ಎದೆಯ ಹಣತೆಗೆ ಬುಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ರೈತ ಸಂಘ, ಕನ್ನಡ ಚಳವಳಿಯ ಜೊತೆಗೆ ಹೋರಾಟದ ಹಿನ್ನೆಲೆಯುಳ್ಳ ಬಾನು ಮುಷ್ತಾಕ್, ಪ್ರಗತಿಪರ ಚಿಂತಕರೂ ಆಗಿದ್ದಾರೆ ಎಂದರು. ಈ ಬಾರಿ ಶಾಸ್ತ್ರದ ಪ್ರಕಾರ ಹನ್ನೊಂದು ದಿನ ದಸರಾ ನಡೆಯಲಿದೆ. ಅಕ್ಟೋಬರ್ 2 ರಂದು ವಿಜಯದಶಮಿ ಎಂದರು.
ರಕ್ಷಣಾ ಸಚಿವರಿಗೆ ಪತ್ರ
ಮೈಸೂರು ದಸರಾ #Mysore Dasara ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ #Defence Minister Rajnath Singh ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು.
ಆ. 29 ರಂದು ಪಾದಯಾತ್ರೆಯಲ್ಲಿ ಭಾಗಿ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು #Rahul Gandhi ಬಿಹಾರದಲ್ಲಿ ಮತಗಳ್ಳತನ ನಡೆದಿರುವುದನ್ನು ವಿರೋಧಿಸಿ 16 ದಿನಗಳ ಪಾದಯಾತ್ರೆಯನ್ನು ಕೈಗೊಂಡಿದ್ದು, ಈ ತಿಂಗಳ 29 ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ಲೋಕಸಭೆಯಲ್ಲಿ 30 ದಿನಗಳ ಕಾಲ ಜೈಲು ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ ಮುಖ್ಯಮಂತ್ರಿಗಳನ್ನು ವಜಾ ಮಾಡುವ ಮಸೂದೆ ಬಗ್ಗೆ ಮಾತನಾಡಿ, ಮಸೂದೆಯನ್ನು ಸದನ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post