ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ರೀತಿಯೂ ಕ್ಷಮೆ ಕೇಳಬಹುದೆನ್ನುವ ವಿಶೇಷ ಸಂಗತಿ ಈಗಷ್ಟೇ ಗೊತ್ತಾಯ್ತು- ಬೆಂಗಳೂರು: ಮನಸ್ಸಿನ ಕಹಿಯನ್ನೆಲ್ಲ ಕಕ್ಕಿದ ಮೇಲೆ “ಕೆಲವೊಂದು ಮಾತು ವೇದಿಕೆ ಗಲ್ಲ” ಎಂದು ಹೇಳುತ್ತಲೂ ಕ್ಷಮೆ ಕೇಳಬಹುದು ಎಂಬ ವಿಶೇಷ ಸಂಗತಿ ಇಂದು ಗೊತ್ತಾಯಿತು ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹಂಸಲೇಖರ ಮಾತುಗಳಿಗೆ ಖಾರವಾಗಿ ಪ್ರತಿಕ್ರಯಿಸಿದ್ದಾರೆ.
ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದಾಖಲಿಸಿರುವ ಅವರು ಹಂಸಲೇಖರಿಗೆ ಬೇಷರತ್ತಾಗಿ ಕ್ಷಮೆ ಕೇಳುವ ದೊಡ್ಡ ಗುಣವೂ ಇಲ್ಲ. ಎದುರಿಗಿನ ಜನ ಚಪ್ಪಾಳೆ ತಟ್ಟುತ್ತಾರೆ & ಶಿಳ್ಳೆ ಹಾಕುತ್ತಾರೆ ಎಂದು ಸಂದರ್ಭ ಪ್ರಜ್ಞೆ, ಸಭಾ ಪ್ರಜ್ಞೆ ಕಳೆದುಕೊಂಡು ಅನಗತ್ಯವಾಗಿ ಏನೆಲ್ಲಾ ಹೇಳಿಬಿಟ್ಟ ಮೇಲೆ “ಕ್ಷಮೆ, ಕ್ಷಮೆ” ಎಂದು ಕೇಳುವುದೂ ಸಂಗೀತ ನಿರ್ದೇಶಕರು ಹೊರಹೊಮ್ಮಿಸಿರುವ ಕೆಟ್ಟ ಅಪಸ್ವರ ಎಂದು ಅವರ ಹೆಸರು ಉಲ್ಲೇಖಿಸದೇ ವಿವರಿಸಿದ್ದಾರೆ.
ಎದುರಿಗೆ ಚಪ್ಪಾಳೆ ತಟ್ಟುವ ಜನರಿಗಿಂತ, ತನ್ನ ಚುಚ್ಚು ಮಾತುಗಳಿಂದ ಘಾಸಿಯಾಗುವ ಅಪಾರ ಸಂಖ್ಯೆಯ ಜನರ ಭಾವನೆ, ಇಷ್ಟು ವರ್ಷ ಸಾರ್ವಜನಿಕ ಜೀವನ ನೋಡಿರುವವರಿಗೆ ಅರ್ಥವಾಗಬೇಕಿತ್ತು. ಈಗ ಕ್ಷಮೆ ಕೇಳೋ ವಿಡಿಯೋದಲ್ಲೂ “ಕೆಲವೊಂದು ಮಾತುಗಳು ವೇದಿಕೆಗಲ್ಲ” ಅಂದಿದ್ದಾರೆ. ಅಂತಹ ಮಾತುಗಳು ವೇದಿಕೆಗಲ್ಲ, ಮನಸ್ಸಲ್ಲಿದ್ದರೂ ವಿಷ ಅನ್ನೋದು ಇಷ್ಟು ವಯಸ್ಸಿನ ಹಿರಿಯರಾದವರಿಗೆ, ಇಷ್ಟೊಂದು ಅನುಭವ ಇರುವವರಿಗೆ ಗೊತ್ತಿಲ್ಲವೆ? ಇವರ ಅರ್ಥಹೀನ ಮಾತಿನಿಂದ ಪೇಜಾವರ ಶ್ರೀಗಳ ಶ್ರೇಷ್ಠ ವ್ಯಕ್ತಿತ್ವಕ್ಕೆ ಏನೂ ಕುಂದಾಗುವುದಿಲ್ಲ. ರಾಗ ತಪ್ಪಿದವರ, ವಿವೇಚನೆಯ ತಾಳ ಕಳೆದುಕೊಂಡವರ ತೂಕ ಕಡಿಮೆಯಾಯಿತು ಅಷ್ಟೇ! ಎಂದಿರುವ ಸುರೇಶ್ ಕುಮಾರ್, ಏನೇ ಆಗಲಿ. ಅವರಿಗೆ ತಿಳುವಳಿಕೆ ನೀಡಿರುವ ಅವರ ಧರ್ಮಪತ್ನಿ ಯವರಿಗೆ ನನ್ನ ಅಭಿನಂದನೆಗಳು ಎಂದು ಹಂಸಲೇಖರವರ ಪತ್ನಿಗೆ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post