ಬೆಂಗಳೂರು: ಶ್ರೀ ವ್ಯಾಸರಾಜ ಗುರುಸಾರ್ವಭೌಮರ 480ನೆಯ ಆರಾಧನಾ ಮಹೋತ್ಸವವನ್ನು ಶ್ರೀನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಶ್ರೀವಿದ್ಯಾವಿಜಯ ತೀರ್ಥರ ಶಿಷ್ಯವೃಂದವು ಬೆಂಗಳೂರು ನಗರದ ಶ್ರೀನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಾರ್ಚ್ 23 ರಿಂದ 25ರವರೆಗೆ ಅನೇಕ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಶಿಷ್ಠವಾಗಿ ಆಚರಿಸಿಲಾಯಿತು.
ಮೊದಲ ದಿನ ಬೆಳಿಗ್ಗೆ ಶ್ರೀವಾದಿರಾಜರ ಆರಾಧನೆ ಅಂಗವಾಗಿ ಹರಿವಾಯು ಸ್ತುತಿ, ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಸ್ತೋತ್ರ ಪಾರಾಯಣ ನಡೆಯಿತು.
ಶ್ರೀಮತ್ ದಶಪ್ರಮತಿ ದರ್ಶನ ಪ್ರಕಾಶಿನಿ ವಿದ್ವತ್ ಸಭಾವನ್ನು ಉದ್ಘಾಟಿಸಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಮಾತನಾಡಿದರು.
ಗುರುಮುಖದಿಂದ ಗಳಿಸಿದ ಸಾಂಪ್ರದಾಯಿಕ ವಿದ್ಯೆಯನ್ನು ಜೀವನ ಪರ್ಯಂತ ಸ್ವಯಂ ಕಲಿಕೆಯ ಮೂಲಕ ರಕ್ಷಿಸಿ, ಬೆಳೆಸಿ, ಆ ಪರಿಶ್ರಮದ ಫಲಿತಗಳನ್ನು ಸಮಾಜಕ್ಕೆ ಧಾರೆ ಎರೆಯುತ್ತಿರುವ ಅಪೂರ್ವ ಸಾಧಕರಾದ ಶ್ರೀವಿದ್ಯಾವಿಜಯತೀರ್ಥ ಶ್ರೀಪಾದಂಗಳವರಿಗೆ ಅವರ ವೇದ-ಶಾಸ್ತ್ರ ವಿದ್ಯಾಪರಿಣತಿಗಾಗಿ ಮತ್ತು ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿರುವುದು ನಿಜಕ್ಕೂ ವಿದ್ವತ್ ವಲಯದಲ್ಲಿ ಹೆಮ್ಮೆ ಮತ್ತು ಸಂಭ್ರಮ ಮೂಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಜೆ ವ್ಯಾಸತ್ರಯಗಳ ವೈಶಿಷ್ಟ್ಯ ಕುರಿತು ವಿಚಾರ ಗೋಷ್ಠಿಯು ಮಹಾಮಹೋಪಾಧ್ಯಾಯ ವಿದ್ವಾನ್ ರಾಜಾ ಎಸ್. ಗಿರಿಆಚಾರ್ಯರ ಅಧ್ಯಕ್ಷತೆಯಲ್ಲಿ ಅನೇಕ ಪಂಡಿತರು ವಿಷಯ ಮಂಡಿಸಿದರು. ವಿದ್ವಾನ್ ವಿಷ್ಣುದಾಸ ನಾಗೇಂದ್ರಾಚಾರ್ಯರು ಸಭಾ ನಿರ್ವಹಣೆ ಮಾಡಿದರು.
ಎರಡನೆಯ ದಿನ ಶ್ರೀವ್ಯಾಸರಾಜ ಸ್ತೋತ್ರ ಅಷ್ಟೋತ್ತರ ಶತವಾರ ಪಾರಾಯಣ, ಬೆಳಿಗ್ಗೆ ಗೋಪಾಲಃ ಸರ್ವಪಾಲಕಃ (ಶ್ರೀಕೃಷ್ಣ ಮಹಿಮಾ ಚಿಂತನಾ) ಕುರಿತು ತಂಬಿಹಳ್ಳಿ ಮಾಧವತೀರ್ಥ ಮಠದ ಶ್ರೀವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀವಿದ್ಯಾಸಿಂಧು ಮಾಧವ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ವಿದ್ವತ್ ಸಭಾ ನಡೆಯಿತು. ಇದೇ ಸಂದರ್ಭದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಸಂಜೆ ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರದ ನೀತಿ ಆಯೋಗದಿಂದ ಮಾನ್ಯತೆ ಪಡೆದ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ರವರ ಗೌರವ ಡಾಕ್ಟರೇಟ್ ಪುರಸ್ಕಾರ ಸಮಾರಂಭದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣ ತಜ್ಞ ಡಾ. ಕೆ.ಎಸ್. ಸಮೀರ ಸಿಂಹ ಪ್ರಶಸ್ತಿ ಪತ್ರವನ್ನು ಸರ್ಮಪಣೆ ಮಾಡಿದರು.
ದಾಸ ಸಾಹಿತ್ಯ ಸಂಶೋಧಕ ಡಾ. ಅನಂತಪದ್ಮನಾಭ ರಾವ್ ಅವರು ನಿರಂತರ ಅಧ್ಯಯನ, ಶಾಸ್ತ್ರ ಚಿಂತನೆ, ಧಾರ್ಮಿಕ ಅನುಸಂಧಾನ ಮತ್ತು ಆಚಾರ್ಯ ಪರಂಪರೆಯ ಬಗ್ಗೆ ಗೌರವ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಶಾಸ್ತ್ರಕೋವಿದರೆಂದು ಗುರುತಿಸಿಕೊಂಡು ಅನೇಕ ಮಂದಿ ವಿದ್ವಾಂಸ ಶಿಷ್ಯರನ್ನು ತಯಾರು ಮಾಡಿ ಭಾರತೀಯ ಸನಾತನ ಸಂಸ್ಕೃತಿಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಐವಿಯುಪಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಪ್ರಾಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಮತ್ತು ಶ್ರೀನಗರ ಶ್ರೀರಾಘವೇಂದ್ರಸ್ವಾಮಿ ಬೃಂದಾವನ ಟ್ರಸ್ಟ್ ಅಧ್ಯಕ್ಷ ಶ್ರೀ ಎ.ಆರ್. ಆಚಾರ್ ರವರು ಭಾಗವಹಿಸಿದ್ದರು.
Discussion about this post