ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮಾನ ಅವಕಾಶಗಳಿಂದ ನೆಮ್ಮದಿ ಶಾಂತಿಯಿಂದ, ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕಟ್ಟುತ್ತೇವೆಂಬ ನಂಬಿಕೆಯಿಂದ ಜನರು ಕಾಂಗ್ರೆಸನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ತಿಳಿಸಿದರು.
ವಿಧಾನ ಪರಿಷತ್’ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿ, ರಾಜ್ಯದ ಜನರು ಯಾವತ್ತು ಬಿಜೆಪಿಯವರಿಗೆ ಆರ್ಶೀವಾದ ಮಾಡಿಲ್ಲ. ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು, ಮ್ಯಾಂಡೇಟ್ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದರು.
ಧರ್ಮಗಳ ನಡುವೆ ಬೆಂಕಿಯಿಡುವುದು ನಮ್ಮ ಪರಂಪರೆಯಲ್ಲ
ಕರ್ನಾಟಕದ ಒಂದು ಸಾವಿರ ವರ್ಷಗಳ ಪರಂಪರೆಯನ್ನು ಭಾಷಣದಲ್ಲಿ ಮಾಡಿಕೊಟ್ಟಿದ್ದಾರೆ. ಕವಿರಾಜಮಾರ್ಗ ಶ್ರೀ ವಿಜಯ ದಲ್ಲಿ ಪರಧರ್ಮವನ್ನು, ಜೀವನ ಮಾರ್ಗಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದೇ ಆಸ್ತಿ ಮತ್ತುಒಡವೆ ಎಂದು ಅದರಲ್ಲಿ ತಿಳಿಸಿದ್ದಾರೆ. ಅದೇ ಸಮಾಜದ ಆಸ್ತಿ ಎಂದು ಅಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಧರ್ಮಗಳು ಬೇರೆ ಇರಬಹುದು. ಆದರೆ ಎಲ್ಲ ಧರ್ಮಗಳ ಸಾರ ಒಂದೇ. ಮನುಷ್ಯರ ನಡುವೆ ಗೋಡೆ ಕಟ್ಟುವುದು, ಧರ್ಮಗಳ ನಡುವೆ ಬೆಂಕಿ ಇಡುವುದು ಅಮಾನವೀಯವಾದುದು. ಅದು ನಮ್ಮ ಪರಂಪರೆ ಅಲ್ಲ. ಎಲ್ಲರದರಲ್ಲೂ ವೈರುಧ್ಯಗಳಿದ್ದರೂ, ಏಕತೆಯನ್ನು ಕಾಣಬೇಕು. ಅದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದು ಒಂದು ಧರ್ಮ, ಜಾತಿಗೆ ಅಂಟಿಕೊಂಡವರಲ್ಲ ಎಂದರು.
ಜಾತ್ಯತೀತೆಯ ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧ
ಎಲ್ಲ ಧರ್ಮ, ಜಾತಿ, ಆಚಾರಗಳನ್ನು ಗೌರವಿಸುತ್ತೇವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಆದಿಕವಿ ಪಂಪ ಹೇಳಿದರು. ನಾವೆಲ್ಲರೂ ಮಾನವತಾವಾದಿಗಳು. ಇದೇ ನಮ್ಮ ಸಂವಿಧಾನದಲ್ಲಿರುವದರಿಂದ, ಸಂವಿಧಾನದ ಹೊರತಾಗಿ ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಈ ಸಿದ್ಧಾಂತಕ್ಕೆ ಕಾಂಗ್ರೆಸ್ ಪಕ್ಷ ಬದ್ಧತೆಯಾಗಿದೆ. ಇದನ್ನೇ ಜಾತ್ಯಾತೀತೆ ಎಂದು ಸಂವಿಧಾನ ತಿಳಿಸಿದೆ. ಭಾರತ ದೇಶದಲ್ಲಿ 142 ಕೋಟಿ ಜನತೆ ಇದೆ. ಅಷ್ಟು ಜನರೆಲ್ಲರೂ ಒಂದೇ, ನಾವೆಲ್ಲಾ ಭಾರತೀಯರೇ. ಯಾರದೋ ಸ್ವಾರ್ಥಕ್ಕಾಗಿ ಜಾತಿ ಮಾಡಲ್ಪಟ್ಟಿತ್ತು. 850 ವರ್ಷಗಳ ಹಿಂದೆಯೆ ಬಸವಣ್ಣನವರು ಹೇಳಿದಂತೆ , ಕಾಯಕ ಮತ್ತು ದಾಸೋಹ. ವೃತ್ತಿಯಲ್ಲಿ ಯಾರು ಮೇಲೂ ಅಲ್ಲ ಕೀಳೂ ಅಲ್ಲ. ಅನುಭವ ಮಂಟಪ ಅಲ್ಲಿಂದಲೇ ಬಂದಿದ್ದು. ವಿಧಾನಮಂಡಲದ ಪರಿಕಲ್ಪನೆ ಅಲ್ಲಿಂದಲೇ ಬಂದಿದೆ ಎಂದರು.
ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು
ಬಿಜೆಪಿಯವರಿಗೆ ಜಾತಿಯತೆ ಮಾಡಬೇಡಿ ಎಂದು ಬಹಳ ಬಾರಿ ಹೇಳಿದ್ದೇನೆ. ನಾವೇ, ನಮ್ಮ ಧರ್ಮವೇ ಶ್ರೇಷ್ಠ ಎನ್ನಬಾರದು. ಇದನ್ನು ಜನ ಒಪ್ಪಲ್ಲ. 5 ಚುನಾವಣೆಯಲ್ಲಿಯೂ ಜನ ನಿಮ್ಮನ್ನು ನಂಬಲ್ಲ. ಹಿಟ್ಲರ್ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಯಾಕೆ ಬೇಸರ? ಹಿಟ್ಲರ್ ಒಬ್ಬ ಮತಾಂಧ , ಬಿಜೆಪಿಯವರು ಅವನ ಪರವೇ? ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು. ಜಾತಿ ನಡುವೆ ಬೆಂಕಿ ಹಚ್ಚಿದರೆ ಅದು ನಮ್ಮನೇ ಸುಡುತ್ತದೆ. ನಮ್ಮ ಸಮಾಜ ಒಳಿತಿಗೆ ಏನು ಮಾಡಬೇಕು. ರಾಜಕೀಯವಾಗಿ, ಸಾಮಾಜಿಕವಾಗಿ ಅಸಮಾನತೆ ಇದ್ದು, ಅದನ್ನು ಹೋಗಲಾಡಿಸಬೇಕು. 1949, ನವೆಂಬರ್ 29 ನಲ್ಲಿ ಅಂಬೇಡ್ಕರ್ ಅವರು ಐತಿಹಾಸಿಕ ಭಾಷಣ ಮಾಡಿದರು. ನಾವು ಎಲ್ಲರಿಗೂ ಸಮಾನತೆ ನೀಡಿದ್ದೇವೆ. ಒಂದು ಮತ, ಒಂದು ಮೌಲ್ಯ ಎಂದಿದಾರೆ. ಆದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಅಸಮಾನತೆ ಇದೆ. ಪ್ರಜಾಪ್ರಭುತ್ವದ ಸೌಧ ಧ್ವಂಸವಾಗುತ್ತದೆ ಎಂದು ಆಗಲೇ ಎಚ್ಚರಿಕೆ ನೀಡಿದ್ದರು ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post