ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಂದುಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯ Yugadi ದಿನವನ್ನು ಧಾರ್ಮಿಕ ದಿನವನ್ನಾಗಿ ವಿಶೇಷವಾಗಿ ಆಚರಿಸುವಂತೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ Minister Shashikala Jolle ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿರುವ ಅನೇಕ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ, ಧ್ಯೇಯೋದ್ದೇಶಗಳನ್ನು ಹೊಂದುವ ಹೆಸರಿನೊಂದಿಗೆ ವರ್ಷದ ಒಂದು ದಿನವನ್ನು ಇಲಾಖೆಯ ದಿನಾಚರಣೆಯನ್ನು ಆಚರಿಸುತ್ತಾರೆ. ಅದೇ ರೀತಿ ಧಾರ್ಮಿಕ ದತ್ತಿ ಇಲಾಖೆಯೂ ಕೂಡಾ ಧಾರ್ಮಿಕ ಹಿನ್ನಲೆ ಮತ್ತು ಮನೋಭಾವವನ್ನು ಹೊಂದಿರುವ ಇಲಾಖೆಯಾಗಿರುವುದರಿಂದ ವರ್ಷದಲ್ಲಿ ಒಂದು ದಿನವನ್ನು ಧಾರ್ಮಿಕ ದಿನವೆಂಬ ಹೆಸರಿನಿಂದ ಆಚರಣೆ ಮಾಢುವುದು ಸೂಕ್ತ ಎನ್ನುವುದು ನಮ್ಮ ಆಲೋಚನೆಯಾಗಿತ್ತು. ಆದರೆ ರಾಜ್ಯದ ಕೆಲವು ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಇನ್ನು ಕೆಲವು ಭಾಗಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರತಿವರ್ಷ ಶುಭಕೃತ್ ನಾಮ ಸಂವತ್ಸರ ಚಾಂದ್ರಮಾನ/ಸೌರಮಾನ ಯುಗಾದಿಯ ದಿನಗಳಂದು ನಮ್ಮ ಇಲಾಖಾ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಧಾರ್ಮಿಕ ದಿನಾಚರಣೆಯನ್ನು ಆಚರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಅಂದಿನ ದಿನದಂದು ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಸಾರ್ವಜನಿಕ ಭಕ್ತಾದಿಗಳ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಪಂಚಾಂಗ ಶ್ರವಣ ಮಾಡಿಸುವ ಮೂಲಕ ಸಾರ್ವಜನಿಕ ಭಕ್ತರಿಗೆ ಹೊಸ ಸಂವತ್ಸರದ ಶುಭಾಶುಭ ಫಲಗಳು, ಆದಾಯ ವ್ಯಯಗಳೂ, ನಕ್ಷತ್ರಗಳ ಫಲಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಕಾರ್ಯಕ್ರಮವನ್ನು ಆಯೋಜಿಸಬೇಕು. ಅಲ್ಲದೆ, ಚಾಂದ್ರಮಾನ ಯುಗಾದಿ ದಿನದಂದು, ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಮಚಿತ್ತ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ತತ್ವವನ್ನು ಹೊಂದಿದ್ದು, ರೂಢಿಯಲ್ಲಿರುವಂತೆ ದೇವಾಲಯಗಳಲ್ಲಿ ಬೇವು ಮತ್ತು ಬೆಲ್ಲಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಸುತ್ತೋಲೆಯನ್ನು ಹೊರಡಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದ್ದಾರೆ.
Also read: `ಈಗಲ್’ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ ರೋಬೊ
ಸದರಿ ದಿನದಂದು ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಪಂಚಾಂಗ ಶ್ರವಣ, ಹರಿಕಥೆ, ವಿಶೇಷ ಪೂಜೆ, ಭಜನೆ, ಹರಿಕಥೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಧಾರ್ಮಿಕ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸೂಚನೆ ನೀಡಿದ್ದೇವೆ.
-ಸಚಿವೆ ಶಶಿಕಲಾ ಜೊಲ್ಲೆ
ರಾಜ್ಯ ಧಾರ್ಮಿಕ ದಿನಾಚರಣೆಯ ಮಾರ್ಗಸೂಚಿಗಳು:
- ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಯುಗಾದಿಯನ್ನು “ಧಾರ್ಮಿಕ ದಿನವನ್ನಾಗಿ” ಆಚರಿಸುವುದು
- ರಾಜ್ಯದ ಅಭಿವೃದ್ದಿಗಾಗಿ ಇದೇ ಸಂಧರ್ಭದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ರಾಜ್ಯದ ದೇವಾಲಯಗಳಲ್ಲಿ ಕೈಗೊಳ್ಳುವುದು
- ದೇವಾಲಯಗಳಲ್ಲಿ ಸಕ್ರೀಯವಾಗಿರುವ ಸ್ವಯಂ ಸೇವ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಲಭ್ಯತೆಗೆ ಅನುಸಾರವಾಗಿ ಆಯೋಜಿಸುವುದು
- ಪ್ರತಿ ದೇವಾಲಗಳಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯು ಈ ಸಂಧರ್ಭವನ್ನು ಬಳಸಿ ಕಾರ್ಯಕ್ರಮಗಳನ್ನು ರೂಪಿಸುವುದು
- ಧಾರ್ಮಿಕ ದಿನಾಚರಣೆಯನ್ನು ಪ್ರತಿ ದೇವಾಲಯಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಯಪಡಿಸುವು ರೀತಿಯಲ್ಲಿ ಕ್ರಿಯಾತ್ಮಕವಾಗಿ ಆಚರಿಸಬೇಕು
- ರಾಜ್ಯದ ಶಿಷ್ಟಾಚಾರ ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಠ ರೀತಿಯಲ್ಲಿ ಆಯೋಜಿಸಬೇಕು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post