ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಸರ್ಕಾರದ ಮಹತ್ಷಕಾಂಕ್ಷೆಯ 5ನೇ ಗ್ಯಾರಂಟಿ ಘೋಷಣೆ ‘ಯುವ ನಿಧಿ’ Yuvanidhi ಯೋಜನೆಯಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಸಜ್ಜಾಗಿದೆ.
ಯುವಜನರ ಆಶಾಕಿರಣವಾದ ಸ್ವಾಮಿ ವಿವೇಕಾನಂದ ಜನ್ಮ ದಿನವಾದ ಜ.12ರ ಶುಕ್ರವಾರ ನಡೆಯುವ ಈ ಐತಿಹಾಸಿಕ ಸಮಾರಂಭಕ್ಕೆ ಶಿವಮೊಗ್ಗ ನಗರದ ಹೃದಯ ಭಾಗವೇ ಆದ ಫ್ರೀಡಂ ಪಾರ್ಕ್( ಹಳೆ ಜೈಲ್ ಆವರಣ) ನ ವಿಶಾಲವಾದ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. 85 ಸಾವಿರಕ್ಕೂ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿಯ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, CM Siddaramaiah ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, DCM D K Shivakumar ಸಚಿವರುಗಳಾದ ಮಧು ಬಂಗಾರಪ್ಪ, ಡಾ.ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಸಚಿವರು, ಗಣ್ಯರು, ಶಾಸಕರು ಅಧಿಕಾರಿಗಳು ಚಾಲನೆ ಕೊಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಹಾಗೂ ಅಷ್ಟೆ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
Also read: ಹೆತ್ತ ಕಂದನನ್ನೇ ಕೊಂದ ಸಿಇಒ ಸುಚನಾ ಸೇಠ್ ತಪ್ಪೊಪ್ಪಿಕೊಂಡಿದ್ದೇನು? ರಾಕ್ಷಸೀ ಕೃತ್ಯಕ್ಕೆ ಕಾರಣವೇನು?
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವ ಹಾಗೂ ಕಾರ್ಯಕ್ರಮದ ರೂವಾರಿಗಳಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು, ಕಾರ್ಯಕ್ರಮಕ್ಕೆ, ಬರುವವರಿಗಾಗಿ ವೇದಿಕೆಯ ಸಿದ್ಧತೆ, ಆಸನ ವ್ಯವಸ್ಥೆ, ವಾಹನ ನಿಲುಗಡೆ, ಊಟೋಪಹಾರ ಹಾಗೂ ಮೂಲಭೂತ ವ್ಯವಸ್ಥೆ ಒದಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತ ಖಾಸಗಿ ಒಡೆತನದ ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಯುವನಿಧಿ ಯೋಜನೆಯ ವಿದ್ಯಾವಂತ ನಿರುದ್ಯೋಗಿ ಫಲಾನುಭವಿಗಳಲ್ಲದೇ, ಅಂತಿಮ ವರ್ಷಗಳ ಸೆಮಿಸ್ಟರ್’ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಡಿಪ್ಲೋಮಾ, ಪದವಿ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ವ್ಯವಸ್ಥಿತ ಆಯೋಜನೆಗಾಗಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ.
ಪ್ರತಿ ಬಸ್’ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದಲ್ಲದೇ, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post